ವರದೇಂದ್ರ ಕೆ ಮಸ್ಕಿ ಅವರ ಕವಿತೆ-ಬೆಳದಿಂಗಳು

ನೆನಪಿನ ಬುತ್ತಿಯಲಿ
ಹಳಸದ ಪ್ರಸಾದ ನೀನು
ಅನಂತ ದಿನಕೆ ಮಾಸದ
ಸುವಾಸಿತ ಸಿಹಿ ಕೇಸರಿಬಾತು

ಎಲ್ಲರಲ್ಲೂ ನೀ ಕಂಡು
ನನ್ನಲ್ಲಿ ಸ್ಥಾಪನೆಗೊಂಡೆ
ನಿತ್ಯ ಪ್ರೇಮ ಪೂಜೆ
ನಿರಲಂಕಾರಿ
ನಿರ್ಭಾವದೆದೆಯಲಿ
ಹಬ್ಬಿದ ಹಬ್ಬದ ಪರಮಾನ್ನ ನೀ

ಏನು ಸುಖ,
ನನ್ನೊಳಗೇ ಕಮರುತ್ತಿದೆ
ರಾತ್ರಿ‌ ಹೆಪ್ಪಿಟ್ಟ ಮೊಸರಿನ ಕೆನೆ,
ಕೊನೆಗೂ ರುಚಿಸಲಿಲ್ಲ ನೋಡು
ನಾ ನೀಡಿದ ಸದ್ಭಾವದ ತೆನೆ,
ಇರಲಿ, ಆದರೂ ನನ್ನೆದೆಯೊಳಗೆ
ನಿನ್ಹೆಸರ ತಾಡನಕ್ಕಿಲ್ಲ ಕೊನೆ

ಇದೇನು! ಇದು ನಿನ್ನ
ಅಂತರ್ಮುಖಿ ಛಾಯೆಯೋ?
ಮೆರೆಸಲಾಗದೇ‌ ಉಳಿಸಿಕೊಂಡ
ಪ್ರೇಮ ಪಲ್ಲಕ್ಕಿಯೋ?
ಚಿಮ್ಮಿಸಿದರೆ ಸೋಲುವೆನೆಂಬ ದುಗಡವೋ?
ಏನಿದ್ದರೂ, ಹೀಗಿದ್ದರೂ
ಹಿಂತೆಗೆದುಕೊಳ್ಳದ ವಾತ್ಸಲ್ಯ ನೀನು

ಬಯಸಿದ್ದು ಅಂಗವನ್ನಲ್ಲ ಸಖಿ
ಅಂತರಂಗದ ಅಂಗಳದಲ್ಲಿಷ್ಟು ಜಾಗ
ಅರಿತರೂ ನಟಿಸುವ ನಿನ್ನ ಇರಾದೆ
ನನಗೇನು ಹೊಸತಲ್ಲ ಬಿಡು
ಬಿಟ್ಟಿದೀಯ, ಬಿಟ್ಟಂತೆ ಇದ್ದೀಯ
ನಾ ಮತ್ತಷ್ಟು ಹಚ್ಚಿಕೊಂಡಿರುವೆ
ಹಳೆಯ ನೆನಪಿನ ಬುತ್ತಿಯ
ಪ್ರಸಾದ ಹಳಸದಂತೆ ಕಾಪಿಡುತಿರುವೆ

ತಂಗಳಾಯಿತು, ಮಾತಾಡದೇ
ತಿಂಗಳಾಯಿತು ಪರವಾಗಿಲ್ಲ
ನಿನ್ನ ಹೃದಯದ ಬೆಳದಿಂಗಳು
ನನಗಿಂದು ಮಂಗಳವಾಯಿತು
ನಿನಗೆ? ನೀನೇ ಪ್ರೇಮ ದೇವತೆ
ಮಂಗಳೆ ಸುಮಂಗಳೆ
ಎಂದಿಗೂ ನೀ ತಿಂಗಳ ಬೆಳದಿಂಗಳೆ


Leave a Reply

Back To Top