ಎಚ್. ಗೋಪಾಲ ಕೃಷ್ಣ ಅವರ ಹಾಸ್ಯ ಕವನ ಜಿರಳೆ

ಮಧ್ಯ ರಾತ್ರಿ ಎದ್ದು ನೀರ
ಕುಡಿಯಲು ಅಡುಗೆ ಮನೆ
ಬಾಗಿಲು ತೆರೆದರೆ
ಅಬ್ಬಾ ಅದೇನು ರಾಶಿ ರಾಶಿ ಜಿರಳೆ
ಸಂತೆಗೆ ನೆರೆದ ಹಾಗೆ
ರೇಶನ್ ಅಂಗಡಿ ಮುಂದೆ
ಟಿಕೆಟ್ ಆಕಾಂಕ್ಷಿ ರಾಜಕಾರಣಿ
ಪ್ರೇಮಭಿಕ್ಷೆಗೆ ಕಾದಿರುವ ಹರೆಯದವ
ಮಹಾರಾಣಿ ಕಾಲೇಜಿನ ಎದುರು
ಏನವುಗಳ ಆಕಾರ, ಮೀಸೆ ಯ ಕೂದಲು
ಚಿಕ್ಕ ಪುಟ್ಟ ಮರಿ ಮರಿ ಮಿಲಿಮಿಟರು
ಅರ್ಧ ಇಂಚು ಪೂರ್ತಿ ಇಂಚು
ಮೊಳದುದ್ದ ಬೆಳೆದಾವು ಬಿಟ್ಟರೆ
ಆದಾ ವು ಮಾರುದ್ದ ಹಾವು
ಯಜ್ಞ ಮಾಡಲೇ ಲಂಕಾ ದಹನವೇ
ಗ್ಯಾಸ್ ಚೇಂಬರ್ ಇರಲೇ
ಗನ್ ತೆಗೆದು ಹೊಡೆದು ಉರುಳಿಸಲೇ
ಬುಲ್ ದೋಜರ್ ತಂದು
ಉರುಳಿಸಲೇ ಸಾಲು ಸಾಲು ಗಳ
ಯಾವುದಯ್ಯಾ ಸೂಕ್ತ ಯಾವುದು
ನಾನೇನು ಬುದ್ಧನೇ
ಮಹಾವೀರನ ವಂಶಜನೆ
ಶಾಂತಿ ಮಂತ್ರ ಜಪಿಸಲು
ಇನ್ನೊಂದು ಕೆನ್ನೆ ತೋರಲು
ನಾನೇನು ಮಹಾತ್ಮನೇ
ಬೆಳಗಾಗೆದ್ದು ಮರೆಯದೆ
ಹಿಟ್ಟು ಪಟ್ಟು ವಿಷ ಜೆಲ್ಲು
ತಂದು ಇಕ್ಕಬೇಕಿವಕೆ ಪರಲೋಕ
ಪ್ರಯಾಣಕೆ ಪಾಸು ಪೋರ್ಟ್
ಏನಾದರನ್ನಲಿ ಪರಿಸರ ಭಕ್ತರು
ಲಿವ್ ಅಂಡ್ ಲೆಟ್ ಲಿವ್ ಸಂಘದವರು
ಬದುಕಲಾರೆ ನಾ ಈ ಅರೆ ಬರೆ
ಕೆಂಪು ಸೈನಿಕರ ನಡುವೆ
ಪ್ರತಿದಿನ ಹೆದರುತ್ತಾ
ಶಕ್ತಿಯ ಕೊಡು, ಶಕ್ತಿಯ ಕೊಡು
ಶಕ್ತಿಯ ಕೊಡು,ಶಕ್ತಿಯ ಕೊಡು
ಹೇ ಪ್ರಭೋ ಜಿರಳೆ
ಹೋಮ ಮಾಡಲು
ಶಕ್ತಿಯ ಕೊಡು, ಶಕ್ತಿಯ ಕೊಡು
ಶಕ್ತಿಯ ಕೊಡು,ಶಕ್ತಿಯ ಕೊಡು
ಹೇ ಪ್ರಭೋ ಜಿರಳೆ
ಹೆಣ ಸಾಗಿಸಲು
ಶಕ್ತಿಯ ಕೊಡು, ಶಕ್ತಿಯ ಕೊಡು
ಶಕ್ತಿಯ ಕೊಡು,ಶಕ್ತಿಯ ಕೊಡು
ಹೇ ಪ್ರಭೋ ಜಿರಳೆ
ಇಂದ ಜೀವನ ಮುಕ್ತಿಗೆ
ಪ್ರಭೋ ಬಿದ್ದೇನಯಾ ನಿನ್ನ
ಪಾದಕೆ ಮುಕ್ತಿಯ ನೀಡು
ನನಗೆ ಇಲ್ಲ ಜಿರಳೆಗೆ…..


Leave a Reply

Back To Top