ಡಾ.ಯಲ್ಲಮ್ಮ ಕೆ. ಅವರ ಕವಿತೆ-ಆತ್ಮ ಕ[ವಿ]ತೆ

ಕವಿತೆ
ಬರೆಯೋಣವೆಂದು
ಕುಳಿತು
ನನ್ನೀ ಗೋಳನ್ನೇ
ಬರೆದು
ದಿಂಬಿಗೆ
ತಲೆಆನಿಸಿ ಮಲಗಿದೆ..,
ಆಮೇಲೆ ತಿಳಿತು
ಬಾಳೇ –
ಒಂದು ಸುಂದರ
ಕವಿತೆಯೆಂದು!

ಕತೆಯ
ಬರೆಯೋಣವೆಂದು
ಕುಳಿತು
ಎಳೆ – ಹರೆಯದ
ತಣಿಯದ
ಹೆಬ್ಬಯಕೆಗಳ
ಬೆಂಬತ್ತಿ
ಓಡೋಡಿ
ತಿಟ್ಹತ್ತ ತಿರುಗಿ
ಬಸವಳಿದು
ದಿಂಬಿಗೆ
ತಲೆಆನಿಸಿ ಮಲಗಿದೆ..,
ಆಮೇಲೆ ತಿಳಿತು
ಬಾಳಿನ ವ್ಯಥೆಯೇ
ಒಂದು ಸುಂದರ
ಕತೆಯೆಂದು!

ಕವಿತೆ ತಾ
ಎನಿಸುವ,
ಕತೆ ತಾ
ಎನಿಸುವ
ಬಾಳಿನ
ಹುಟ್ಟಿನ
ಮೂಲವ
ಕೆದಕಿದೆ-ಬೆದಕಿದೆ
ಬೆದರಿ-ಬೆಚ್ಚಿ
ದಿಂಬಿಗೆ
ತಲೆಆನಿಸಿ ಮಲಗಿದೆ..,
ಆಮೇಲೆ ತಿಳಿತು
ಬಾಳೇ
ಒಂದು ಸುಂದರ
ನಾಟಕವೆಂದು!

ಕವಿತೆ ಹುಟ್ಟಿತು,
ಕತೆ ಕಟ್ಟಿದೆ
ಅದು
ಎಲ್ಲರ ಎದೆಯ
ತಟ್ಟಿತು ;
ಬಾಳ ನಾಟಕದಿ
ಎಲ್ಲ –
ಪಾತ್ರವ ಮುಗಿಸಿ
ಇತಿ/- ಶ್ರೀ
ಹಾಡಿ-ಪಾಡಿ
ದಿಂಬಿಗೆ
ತಲೆಆನಿಸಿ ಮಲಗಿದೆ..,
ಆಮೇಲೆ ತಿಳಿತು
ಬಾಳ್ವೆಯೇ
ಆತ್ಮದ
ಕತೆಯೆಂದು!.


Leave a Reply

Back To Top