ಬಾಗೇಪಲ್ಲಿಅವರ ಗಜಲ್

ಆತ್ಮೋನ್ನತಿಗಾಗಿ ನಿನ್ನಲಿರುವ “
ನಾನೆಂಬುದನು ಅಳಿಸು
ಧ್ಯಾನಾಸಕ್ತನಾಗಿ ಚಂಚಲ ಮನವನು
ಎದೆಯಾಳಕೆ ಇಳಿಸು

ನಿನ್ನದೆಂಬುದ್ಯಾವುದೂ ಇಲ್ಲ ಎಲ್ಲವನು
ಬಳಸಿ
ಮುಂದಿನ ಪೀಳಿಗೆಯವರಿಗೆ ಇರುವಂತೆ
ಅವುಗಳನ್ನು ಉಳಿಸು

ಸಾಧ್ಯವಿರೆ ನಿನಗೆ ಪ್ರಕೃತಿಗೆ ಹೊಂದುವ
ಹೊಸದನು ಅರಳಿಸು
ತಪ್ಪಲ್ಲವದು ನಿಸರ್ಗದಿಂದ ನಿನ್ನ ಜೀವನಕ್ಕೂ
ಒಂದಿಷ್ಟು ಗಳಿಸು

ಎಲ್ಲರೊಳಗೊಂದಾಗಿ ಬದುಕುವ ಧರ್ಮಸೂಕ್ಷ್ಮವ
ಎಲ್ಲರಿಗೂ ತಿಳಿಸು
ಸಹನೆಯ ಸಂದೇಶವನು ಎಲ್ಲ ದಿಶೆ
ಮನುಕುಲಕೆಲ್ಲಾ ಕಳಿಸು

ಕೃಷ್ಣಾ! ವಸುಧೆಯ ಸಮುದ್ರಕೆ
ಇನ್ನೊಮ್ಮೆಎಸೆಯದಂತೆ ಸಂರಕ್ಷಿಸು
ಕ್ಷಮಯಾ ಧರಿತ್ರೀ ಭೂ ತಾಯಿ ಸದಾ
ಸಂಮೃದ್ಧಿಯಲಿ ನೀ ನಳ ನಳಿಸು


Leave a Reply

Back To Top