ಕಾವ್ಯ ಸಂಗಾತಿ
ದೀಪ್ತಿ ಭದ್ರಾವತಿ
ಬೆಳಕಿಗೊಂದು ಬಿನ್ನಹ
ಬೆಳಕಿಗೊಂದು ಬಿನ್ನಹ
ಏನನ್ನಾದರೂ ಕೊಡಬೇಕು ಎನ್ನಿಸಿದರೆ
ಒಂದಿಷ್ಟು ಕನಸುಗಳನ್ನು
ನನಗೆ ಕೊಡು
ಎದೆಯ ಗೂಡು ಖಾಲಿ ಬಿದ್ದು
ಅದೆಷ್ಟೋ ದಿನಗಳಾಗಿವೆ
ಅಲ್ಲಿ ಅವುಗಳನ್ನು
ಹರವುತ್ತೇನೆ
ಒಣ ನೆಲವೊಂದು ಹಸಿರು ಹೊಮ್ಮಿಸುವಾಗ
ಆಕಾಶದ ತುಣುಕಲ್ಲಿ
ನಕ್ಷತ್ರದ ಅಂಗಡಿ
ತೆರೆಯಲಿ
ಹಚ್ಚುತ್ತೇನೆ ಮೆಲ್ಲಮೆಲ್ಲಗೆ
ಹಸಿ ಗಾಯಗಳ ಮೇಲೆಲ್ಲ
ಮುಲಾಮಿನಂತೆ
ಕಲೆಗಳು ಮಾಯವಾಗುವ
ಮಾಂತ್ರಿಕ ಗಳಿಗೆಯಲ್ಲಿ
ಮಿಂಚುಗಳು ಹರಳುಗಟ್ಟುವಾಗ
ಮುಂಗಾರಿನ ಹನಿ
ತುಟಿ ಅರಳಿಸಲಿ
ಬಳಿಯುತ್ತೇನೆ ಜಗದ ಹೊಸ್ತಿಲ
ತುಂಬೆಲ್ಲ ಇಷ್ಟಿಷ್ಟೆ ಇಷ್ಟಿಷ್ಟೇ
ಬೊಗಸೆಯಲಿ
ಮೊಗೆಮೊಗೆದು
ಒಂದು ಅಮೂರ್ತ ಕ್ಷಣದಲ್ಲಿ
ಹುಟ್ಟಿಕೊಳ್ಳುವ
ಹೂವೊಂದಕ್ಕೆ ಹೆಸರಿಡುವಾಗ
ನಾವಿಬ್ಬರು ಒಂದೇ ಆಗಿ ಪಿಸುಗುಟ್ಟುವುದನ್ನು
ಕತ್ತಲು ಕೇಳಿಸಿಕೊಳ್ಳಲಿ
ದೀಪ್ತಿ ಭದ್ರಾವತಿ
Nice one