ಬಾಲ್ಯದ ಮುಂಗಾರು ಮಳೆ
ನನ್ನ ಬಾಲ್ಯದ ಮಳೆಗಾಲ ಈಗ ಮೊದಲಿನಂತಿಲ್ಲ
ಬಹುಶಃ ಕಾಲದೊಂದಿಗೆ ಬೆಳೆದು ಮೊದಲಿನ ಮಾತಿಲ್ಲ
ಮುಂಗಾರು ಆಗಲೇ ಬಾಗಿಲು ಬಡಿದು ನಿಂತಿದೆ
ವರ್ಷ ಋತುವಿನ ಮೊದಲ ಮಳೆಯ ತಂದಂತಿದೆ
ಮನೆಯ ಕಿಡಕಿಯಿಂದ ನೋಡಿದರೆ ಆಕಾಶದಲಿ
ಕಪ್ಪು ಮೋಡಗಳ ಗರ್ಜನೆಗೆ ನರ್ತಿಸುವ ಮಳೆಹನಿ
ಗಾಜಿನ ಮಣಿಗಳು ಗೋಡೆಗೆ ಟಳಾಯಿಸುತಲಿವೆ
ಅಬ್ಬರಿಸುವ ಮಳೆಯ ಸಂಗೀತ ಆಲಾಪಿಸುತಲಿದೆ
ಕೆಲವೊಮ್ಮೆ ನಾ ಆಡುತಲಿದ್ದೆ ಅವುಗಳೊಂದಿಗೆ
ಅದಕಾಗಿ ಅವು ಈಗ ನನ್ನನು ಕರೆಯುತಲಿವೆ
ನಾನಾಗ ಕಿರಿಯಳು ಈ ಮಾತು ಹಿರಿದಾಗಿತ್ತು
ಆವಾಗ ಹೊತ್ತಿಗೆ ಮನೆಗೆ ಬರುವುದು ಯಾರಿಗಿತ್ತು
ಮಳೆಯ ನೀರಿನಲಿ ನೆನೆಯಲು ಓಡಿದ ಎಳೆ ಮನಸು
ಅವಳ ಕೈಹಿಡಿದು ತಡೆದ ನನ್ನಲ್ಲಿಯ ಬೆಳೆದ ಮನುಷ್ಯ
ಮಳೆಗಾಲ ಮತ್ತು ನನ್ನ ಅಮಾಯಕ ಬಾಲ್ಯದ ಮಧ್ಯ
ತಿಳುವಳಿಕೆಯ ಗೋಡೆಯೊಂದು ಎದ್ದು ನಿಂತಿದೆ ಸಧ್ಯ
ಗುಡುಗು ಸಿಡಿಲು ಮಿಂಚು ನಿಸರ್ಗದ ರಮಣೀಯತೆ
ಮೊದಲಿನ ಭಯಂಕರ ಗರ್ಜನೆ ಮನಕೆ ಹಿಡಿಸುತ್ತಿತ್ತು
ಈಗ ಹೆದರಿಸುತ್ತಿದೆ ಕುತ್ತೆನಿಸಿದ ಮಳೆ ಆಪತ್ತಾಗಿ
ಭಯಭೀತ ನಾವಾದರೆ ಕೆಟ್ಟ ಹೆಸರು ಬಂತು ಮಳೆಗೆ
ಯಾವ ನೀರಿನಲಿ ಕುಣಿದಾಡುತ್ತಿದ್ದೆವೋ
ಅದರಲ್ಲೀಗ ಕೀಟಾಣುಗಳು ಕಾಣುತ್ತಲಿವೆ
ಅದಕ್ಕೂ ಹೆಚ್ಚಾಗಿ ಲ್ಯಾಪ್‌ಟಾಪ್ ತೊಯ್ದೀತಲ್ಲಾ
ಅನ್ನುವ ಅನುಮಾನ ಹಣುಕಿ ಇಣುಕುತ್ತಿದೆ
ಭರಪೂರ ಮಳೆಯಾಗಿ ಶಾಲೆಗೆ ಸೂಟಿಯಾಗಲಿ
ಅಂತ ಬಯಸುತ್ತಿದ್ದ ಅಂತರಂಗ ಬಾಲ್ಯದಲಿ
ಮಳೆ ಬಂದು ಆಫೀಸ್ ಸೂಟಿಯಾಗಬಾರದಲ್ಲ
ಎನ್ನುವ ಆತಂಕದ ಮನೋಭಾವ ಬೆಳೆದವರಲ್ಲಿ
ಹಪ್ಪಳ ಸಂಡಿಗೆಯೊಂದಿಗೆ ಬಿಸಿ ಚಹಾ
ಮಳೆಗಾಲದ ಮಜವಾಗಿತ್ತು ಆಗ
ಅಂಥ ಸಮಯ ಸಂಗತಿ ಬೆಳೆದಂತೆ
ಎಲ್ಲೋ ಕಳೆದು ಮಾಯವಾಗಿದೆ ಈಗ
*********
ವಿನುತಾ ಹಂಚಿನಮನಿ