ಸರೋಜಾ ಎಸ್. ಅಮಾತಿಯವರ ಕವಿತೆ-ರೈತನ ಬದುಕು

ಗುಡುಗು ಮಿಂಚಿಲ್ಲ
ಮಳಿ ಅಣ್ಣ ಬಂದಿಲ್ಲ
ಗಂಜಿಗೂ ಗತಿಯಿಲ್ಲ ದೇವರೆ
ಸಾವಾಗ ಬದುಕು ರೈತರದೆಲ್ಲ!

ತೆನಿ ತಾ ಕಾಳ ಬಿಡಲಿಲ್ಲ
ಹಕ್ಕಿನ ಕೂಗಿ ಕರಿಲಿಲ್ಲ
ಕೆನಿ ಹಾಲು ಹೈನವಿಲ್ಲ ದೇವರೆ
ದನಕರುಗಳಿಗೂ ಹಸಿ ಹುಲ್ಲಿಲ್ಲ

ಹಿಟ್ಟಾಗು ಕಾಳ ಅಟ್ಟದಾಗ ಇಲ್ಲ
ಬಣವ್ಯಾಗ ಕಣಜಾ ಇಲ್ಲ ದೇವರೆ
ಹಸಿದ ಹೊಟ್ಟಿಗಿ ಮುಟಿಗಿ
ಹಿಟ್ಟಿಲ್ಲ

ಒಲಿ ಉರಿಗಿ ಇದ್ದಿಲ ಕೆಂಡ
ಕುದಿಗಿಟ್ಟ ಗಂಜಿಯ ಗುಂಡ್ಯ ದೇವರೆ
ಒಪ್ಪತ್ತಿಗಿಲ್ಲ ಒಣ ಪಲ್ಯ
ಬೀಜಕ್ಕಿಟ್ಟ ತೆನಿ ನೆಂಪಿಲ್ಲ

ನೇಗ್ಲಾ, ಕುಂಟಿ ಕುಡಗೋಲಾ,ಕೊಡ್ಲಿ
ಮರತ ಕುಂತಾವು ಸುಣ್ಣಿರದ ಗ್ವಾಡಿಗಂಟಿ ದೇವರೆ
ಜೋಡೆತ್ತತ್ತಾವು ನೆನೆಸಿ
ಎರೆಮಣ್ಣಿನ ಹೆಂಟಿ

ನೆತ್ತಿ ಸುಡು ಬಿಸಲಾ
ಎದಿನೂ ಸುಡಾಕತೈತಿ
ಸಾಯುದಕ್ಕೂ ಪುಡಿಗಾಸಿಲ್ಲ ದೇವರೆ,ಸಮಯಕ್ಕ
ಮಳೆಯೊಂದ ಬೇಡ್ಯಾರು ರೈತ್ರೆಲ್ಲ!


Leave a Reply

Back To Top