ಕಾವ್ಯ ಸಂಗಾತಿ
ಎ.ಎನ್.ರಮೇಶ್.ಗುಬ್ಬಿ
ಗಂಡು ಅಳಬಾರದು
ಆಳುವ ಗಂಡು ಅಳಬಾರದಂತೆ
ನೋವು ನುಂಗಿ ನಗಬೇಕಂತೆ
ಪುರುಷನೆಂದು ಗೋಳಾಡಬಾರದಂತೆ
ಕಹಿಯುಂಡು ಹಸನ್ಮುಖಿಯಿರಬೇಕಂತೆ.!
ಹೆಣ್ಣಿನ ಕಂಬನಿಗೆ ಕರಗಬೇಕಂತೆ
ಮಿಡಿಯಬೇಕಂತೆ ಮರುಗಬೇಕಂತೆ
ತನ್ನೊಳಗೆ ಅದೆಷ್ಟೇ ಕೊರಗಿದ್ದರು
ಹೊರಹಾಕಿ ಕಂಗಳ ಹನಿಸಬಾರದಂತೆ.!
ತನ್ನವರ ತಲೆಸವರಿ ಸಂತೈಸಬೇಕಂತೆ
ಕಣ್ಣೀರೊರೆಸಿ ಕಕ್ಕುಲತೆ ತೋರಬೇಕಂತೆ
ಸಾಗರದಷ್ಟು ದುಃಖ ಸಂಕಟವಾದರೂ
ಅವಡುಗಚ್ಚಿ ಸಹಿಸುತ ನಿಲ್ಲಬೇಕಂತೆ.!
ಅಳುವ ಸತಿಯೆದುರು ಸೋಲಬೇಕಂತೆ
ಕಣ್ಣೀರು ಜಾರದಂತೆ ಕಾಯಬೇಕಂತೆ
ಒಡಲ ಕಡಲದಂಡೆಯೇ ಕುಸಿದರೂ
ಕಣ್ಣಂಚು ತೇವವಾಗದಂತೆ ತಡೆಯಬೇಕಂತೆ.!
ನೀರೆಯ ನರಳಿಕೆಗೆ ಆಸರೆಯಾಗಬೇಕಂತೆ
ಗಂಟಲ ಪಸೆ ಆರದಂತೆ ಆದರಿಸಬೇಕಂತೆ
ನೋವಿಗೆ ತನ್ನ ಗಂಟಲುಬ್ಬಿ ಬಂದರೂ
ದನಿ ಗದ್ಗದಿತವಾಗದಂತೆ ಗಟ್ಟಿಯಿರಬೇಕಂತೆ.!
ಬಿಕ್ಕುವ ಬಾಲೆಯ ಎದೆಗಪ್ಪಿಕೊಳ್ಳಬೇಕಂತೆ
ಬೆಚ್ಚಿ ಬಸವಳಿಯದಂತೆ ಕಾಪಾಡಬೇಕಂತೆ
ಎದೆಯೊಡೆದು ಅಬ್ಧಿ ಭೋರ್ಗರೆದರೂ
ಕನಲದೆ ಕುಸಿಯದೆ ದೃಢವಾಗಿರಬೇಕಂತೆ.!
ಮಾನಿನಿಯ ರೋಧನೆಗೆ ರಮಿಸಬೇಕಂತೆ
ಅಳದಂತೆ ಅಕ್ಕರೆಯಲಿ ಆರೈಸಬೇಕಂತೆ
ಅಂತರಂಗದಿ ಅಶ್ರುಧಾರೆ ಧುಮ್ಮಿಕ್ಕಿದರೂ
ಅಧೀರರಾಗದೆ ಅಚಲವಾಗಿ ಕಾಣಬೇಕಂತೆ.!
ಗಂಡೆಂಬ ಜೀವದ ಗುಂಡಿಗೆಯ ಪಾಡಿದು
ಗಂಡಿನ ಭಾವ ಬಂಡೆಯಾಗುವ ಹಾಡಿದು
ಗಂಡನು ಈ ಜಗ ನೋಡುವ ತರಹವಿದು
ಗಂಡಿನ ಹಣೆಯಲಿ ದೈವ ಬರೆದ ಬರಹವಿದು.!
ಎ.ಎನ್.ರಮೇಶ್.ಗುಬ್ಬಿ.