ಭಾವಯಾನಿ ಅವರ ಕವಿತೆ ‘ಅವಳು’

ಸಂಜೆ ಕೈಕಾಲು ಸುಸ್ತಾಗಿ, ಪೆಚ್ಚು ಮೊಗ ಹೊತ್ತು
ಮನೆಯ ಗೇಟು ತೆಗೆದು ಒಳಬರುವಷ್ಟರಲ್ಲಿ
ಅಸೆ ಕಂಗಳ ಹೊತ್ತು ದಿಟ್ಟಿಸಿ ನೋಡುವ
ಪುಟ್ಟ ಕಂದಮ್ಮಗಳ ಮೊಗ ನೋಡುತ್ತಲೇ
ಅವಳೆದೆ ಕರಗುತ್ತದೆ,
ಸೋತ ಕಾಲುಗಳಲ್ಲೇ ಅಡುಗೆ ಮನೆಗೆ ಹೆಜ್ಜೆ ಇಡುತ್ತಾಳೆ!

ಗಂಟಲು ಒಣಗಿ ಉಸಿರು ಕಟ್ಟುತ್ತಿರುವ ಅನುಭವವನ್ನೂ ಮರೆತು ಕುಳಿತಿದ್ದಾಳಾಕೆ
ದೇಹ ಉಸಿರಾಡುತ್ತಿದೆಯಷ್ಟೇ….
ಬದುಕು ಒಣಗುತಿತ್ತು!!

ತಿಕ್ಕಿ ತೊಳೆದ ಪಾತ್ರೆಗಳೆನೋ ಫಳ ಫಳನೆ ಹೊಳೆಯುತ್ತಿವೆ
ಬೆಂಕಿಯಲಿ ಬೆಂದ ಅಡುಗೆಯಿಂದ ಮನೆಯವರ ಉದರ ತಣ್ಣಗಾದರೂ
ಅವಲೊಳಗಿನ ಲಾವಾರಸ ತಣ್ಣಗಾಗುವುದೇ ಇಲ್ಲ,
ತುಂಬು ಮನೆಯಲ್ಲಿ ಒಂಟಿಯಾಗಿ
ಮತ್ತಷ್ಟು ಬೆಂದು ಹೋಗುತ್ತಾಳೆ!!

ಮತ್ತೆ ಬೆಳಗು
ಅವಳದು ಅದೇ ಧಾವಂತದ ಬದುಕು
ಅದೇ ಅಡುಗೆ ಮನೆಯಲ್ಲಿ ಪಾತ್ರೆಗಳ ಜೊತೆ ಸೆಣ ಸಾಡುತ್ತಾ
ಭಾವನೆಗಳ ಜೊತೆಗೂ ನಿತ್ಯ ಸೆಣಸಾಡುತ್ತಲೇ ಇದ್ದಾಳೆ
ಭಾರವಾದ ನಿಟ್ಟುಸಿರ ಜೊತೆಗೆ!!


Leave a Reply

Back To Top