ಕಾವ್ಯ ಸಂಗಾತಿ
ಡಾ. ಸುಮಂಗಲಾ ಅತ್ತಿಗೇರಿ
ಹೇಳಿ ಹೋಗುವೆಯಾ ಕಾರಣ?
ತುಸು ನಿಲ್ಲು ತಂಗಿ
ನೀ ಹೊಂಟಿದ್ದೀಗಾ ಎಲ್ಲಿಗೆ?
ಅಕ್ಕಾ ಅಂತ
ಅಕ್ಕರೆಯಿಂದ
ಬಳಿ ಸುಳಿದ್ಯಾಡಿ
ಈಗ್ಯಾಕ ದೂರ ಹೊಂಟಿ?
ಒಂದೇ ಗಂಗಾಳದಾಗ
ಕೂಡುಂಡು
ಮನೆ ಅಂಗಳದಾಗ
ಕೂಡ್ಯಾಡಿ ಈಗ್ಯಾಕ
ನಡಕ ಬಿಟ್ಟ ಹೊಂಟಿ?
ಅದ್ಯಾಕ ತಂಗಿ
ಈಗೀಗ
ಮುಖಕ್ಕ ಮುಖಕೊಟ್ಟ
ಮಾತಾಡತಿಲ್ಲ
ಏನೀ ಮೌನ
ಇದ್ದಕ್ಕಿದ್ದಂಗ?
ಅದ್ಯಾಕ
ಮುಖದ ಮೇಲಿನ
ಮಂದಹಾಸದ ನಗಿ
ಕಳಕೊಂಡಿ?
ಬಾಳ ತಲಿಕೆಡಿಸ್ಕೊ ಬ್ಯಾಡ ತಂಗಿ
ಇದು ಮೂರ ದಿನದ ಬದುಕೈತಿ
ಬಾಳ ನಮೂನಿ ಮಂದಿ
ಬಾಳ ಬಾಳ ತರಾ ಇರತಾರ
ನೋಡ್ಕೋತ ನಡಿಬೇಕು ಸುಮ್ನ
ಅವರ ಬದುಕ ಅವರಿಗೈತಿ
ನಮ್ಮ ಬದುಕ ನಮಗೈತಿ
ಇದು ಬಾಳ ಮಜಾ ಸಂತಿ ಐತಿ
ಆದರ ಊರಾನ ಸಂತಿ ಎಲ್ಲಾ ನಮ್ದ ಅಲ್ಲಾ ಮತ್ತ!
ಹಿಂಗ ಸಂತ್ಯಾಗ ಸಂತಿ ಮಾಡ್ಕೊಂತ
ನಮಗ ಬೇಕಾದ್ದ ತಗೋಳೊದೈತಿ
ಬ್ಯಾಡಾದ್ದ ಬೀಡೋದೈತಿ
ಅರಾಮಾಗಿ ಇರೋದೈತಿ
ಇಷ್ಟ ಬದುಕೈತಿ!
ನೀ ಯಾಕರ ಮಾಡತಿ
ಒಣಾ ಚಿಂತಿ?
ಮನಕ ಬ್ಯಾಸರಾ
ಆದದ್ದಾದರೂ ಯಾತಕ್ಕ
ಹೇಳಿ ಹೋಗುವೆಯಾ ಕಾರಣ?
ಒಂದ ಛಲೋ ತಿಳಕೊ ತಂಗಿ
ಕಷ್ಟ ಮನುಷ್ಯಾಗ ಬರದ
ಮರಕ್ಕ ಬರತದಾ?
ಇರಬೇಕು ಇರುವಂತೆ
ತೊರೆದು ಎಲ್ಲಾ ಚಿಂತಿ
ಏನಂತಿ?
ಡಾ. ಸುಮಂಗಲಾ ಅತ್ತಿಗೇರಿ