ಕಾವ್ಯ ಸಂಗಾತಿ
ಡಾ. ಮೀನಾಕ್ಷಿ ಪಾಟೀಲ
ಪರಿಮಳದ ಹಾ(ಪಾ)ಡು
ನಿನ್ನ ಮನೆಯಂಗಳದಿ
ಬೆಳೆದಿರುವ ಹೂವು
ಪರಿಮಳವ ಸೂಸಿ
ಪಸರಿಸುವೆ ಮನೆಯೆಲ್ಲ
ನಿನ್ನೊಡಲ ಕುಡಿ ನಾನು
ನಿನ್ನ ದೇಹದ ತುಣುಕು
ತುಂಡರಿಸದಿರು ನನ್ನ
ತಲ್ಲಣಗೊಳ್ಳುವೆ
ಬಣ್ಣ ಬಣ್ಣದ ಕನಸು
ಹೆಣೆದು ನೇಯ್ಗೆಯ ಮಾಡಿ
ಒಂದರೊಳಗೊಂದು
ಚಿನ್ನದೆಳೆಯ
ಕುಚ್ಚ ಕಟ್ಟಿ ಕಾಪಿಟ್ಟು
ಜರಿಯ ಕುಲಾಯಿ
ಬಣ್ಣದ ತೊಟ್ಟಿಲಕ
ಬಂಗಾರದ ಗೊಂಡೆವ
ಗಿಳಿಗುಬ್ಬಿ ನವಿಲುಗಳ
ಚಿತ್ತಾರದ ಕನ್ನಡಿ
ಕುಡಿ ಬಿಂಬವ ನೋಡದೆ
ಚಿಗುರು ಹುಡಿಗೆಡಿಸುವೆಯ
ನಿನ್ನೆದೆಯ ಅಮೃತದ
ಸಿಂಚನವ ಸವಿಯದೆ
ಕೈ ತುತ್ತು ಉಣ್ಣದೆ
ನಿನ್ನ ಮಮತೆಯಲ್ಲಿ ಮೀಯದೆ
ನಿನ್ನನಗಲಿ ಇರುವುದೇ
ಹೇಳವ್ವ
ಹೆಣ್ಣೆಂಬ ಶಬುದ
ನಂಜಾಗಿದೆ ನನಗೆ
ಗಂಟಲಿಗೆ ನೆಲ್ಲನೊತ್ತಿ
ಬಾಯಿಗೆ ಬಟ್ಟೆಯ ಸುತ್ತಿ
ಉಸಿರುಗಟ್ಟಿಸುವರು ಖೂಳರು
ಅವರನ್ನು ಹೆತ್ತವಳು ಹೆಣ್ಣಲ್ಲವೇ
ನೆಲ ಮುಗಿಲು
ಮಣ್ಣು ನೀರಿಗೂ ಮಿಗಿಲು
ಈ ನಿನ್ನ ಒಡಲು
ಕಸುವಾಗು ನನ್ನ ಉಸಿರಿಗೆ
ದನಿಯಾಗು ನನ್ನ ನೋವಿಗೆ
ಜಗವ ತೋರು ಜನುಮ ನೀಡು
ನಿನ್ನ ಮಡಿಲ ಹೂವಾಗುವೆ
ನನ್ನವ್ವ
ಡಾ. ಮೀನಾಕ್ಷಿ ಪಾಟೀಲ