ಕೊ//ಮಾಳೇಟಿರ ಸೀತಮ್ಮ ವಿವೇಕ್ ಅವರ ಕವಿತೆ-ಸತಿ ಪತಿ ಸಮರಸಕೆ ನಮ್ರತೆ

ಸತಿ ಪತಿಯರ ಸರಸ ವಿರಸ|
ನವರಸಗಳ ಹೂರಣವಂತೆ|
ಸಮರಸವಿರದ ಚೀರು ದೂರು|
ಮುಕುರದಾ ಪ್ರತಿಪಲನದಂತೆ|

ಪತಿ ನುಡಿ ಸತಿಗದು ಸಿಡಿಮದ್ದು|
ಸತಿ ಮಾತು ಪತಿಗದು ಆಪತ್ತು|
ಇರ್ವರಿಗೂ ಒಳಗೊಳಗೆ ಜಿದ್ದು|
ವಾಸ್ತವ ನೋಡದ ಸ್ವೈರ ಗತ್ತು|

ನೀ ಸರಿ ನಾ ಸರಿ ತಾಪವಿರೆ|
ಈಕ್ಷಣದ ಬದುಕಿನ ಮರಣ|
ಅನುಕ್ಷಣ ಮನದಿ ನೋವಿರೆ|
ಬಾಳದು ವನದ ಒಂಟಿ ಚಾರಣ|

ಕ್ಷಮೆ ಸ್ವೀಕಾರ ಕಲಿತಿರದ ಗುಣವು|
ಮೊಸರಲು ಕಲ್ಲು ಹುಡುಕುವುದು|
ಹ್ ಕಾರ ನಕಾರಗಳೆರಡರ ಇರುವು|
ಸರಿ ತಪ್ಪುಗಳೆರಡನು ತೀಡುವುದು|

ಹಟ ಚಟಗಳಿಗಾದರೆ ಬಂಧಿಯು|
ಸುಳ್ಳೊಂದು ಸಾಕು ಬೇರಾಗಲು|
ಆಸ್ತೆಯ ಮಾತೇ ತಳಹದಿಯು|
ನಡೆಯಲಿ ನಮ್ರತೆ ಉಳಿಯಲು|


Leave a Reply

Back To Top