ಶೋಭಾ ಮಲ್ಲಿಕಾರ್ಜುನ ಅವರ ಕವಿತೆ-ಅಂತರಾತ್ಮ

ಅರುಣೋದಯದಿಂದ ಅಸ್ತಮಾನದಿರುಳಲಿ
ಮರಳಿ ಮರಳಿ ಸುರುಳಿ ಸುತ್ತಿ ಸುಳಿಯದಿರಲಿ
ನಿನ್ನ ನೆನಹಿನ ಅಲೆಗಳು ಉಕ್ಕದಿರಲಿ ನನ್ನ ಆಹ್ವಾನಕೆ
ಬಿಕ್ಕುತ್ತಿದ್ದರೂ ಮನಸು ಕನಸುಗಳಾದರೂ ಮರೀಚಿಕೆ

ನೀ ಬಿಟ್ಟ ನಿಶಬ್ದದಲ್ಲಿ ಶಬ್ದಗಳನೇ ಅರಸಿದೆ
ಮೌನವೇ ಸ್ವಾದವೆಂದು ನಿವೇದನೆಯ ಮರೆಸಿದೆ
ನೀನುಸಿರಿದ ಮಾತುಗಳಿಗೆ ದಕ್ಕಲು
ಕಲಿತಿರುವೆ ಭಾವನೆಗಳ ಹತ್ತಿಕ್ಕಲು

ಮನದನಿಯ ಮರೆತರೇನು
ಸವೆದ ಜಾಡನು ತೊರೆದರೇನು
ನಿನ್ನ ಸಂತಸಕಾಗಿ ಒಂದಷ್ಟು ಏರ್ಪಾಟು
ಇದೆಂದಿಗೂ ಅಲ್ಲ ಮನದಿಂದಾದ ಮಾರ್ಪಾಟು

ಮಾತಮರೆವ ನಾಲಿಗೆಗಳು ಮನಸ ಮುರಿವ ಹೋಲಿಕೆಗಳು
ಇದೇನು ಹೊಸತಲ್ಲ !!
ಹಳತೇ ನನಗೆಲ್ಲ
ಮುರಿದುದ ಹೆಕ್ಕಿ ತೇಪೆ ಹಾಕಿ ಒಳಹೊಕ್ಕುವುದರಲಿ
ನಿಸ್ಸೀಮಳು ನಾನು
ಅದಕೇ ನನ್ನ ಅಂತರಾತ್ಮ ನೀನು


Leave a Reply

Back To Top