ಅಶನದಾಶೆಯಂ ತೃಷೆಯಂ ತೃಷೆಯಂ
 ಬೆಸನದ ಬೇಗೆಯಂ
 ವಿಷಯದ  ವಿಹ್ವಳತೆಯಂ
 ತಾಪತ್ರಯಗಳ ಕಲ್ಪನೆಗಳಂಗೆಲಿದೆ
 ಇನ್ನೇನಿನ್ನೇನಿಚ್ಛೆಯಾದುದು
 ಚೆನ್ನಮಲ್ಲಿಕಾರ್ಜುನ ನಿನಗಂಜಿ ಅಂಜಿ

12 ನೇ ಶತಮಾನದ ಶ್ರೇಷ್ಠ ಶರಣೆ ಅಕ್ಕಮಹಾದೇವಿಯವರು .ಜಗದ ಉದ್ಧಾರಕ್ಕಾಗಿಯೇ ಉದಯಿಸಿದ ಮಾತೆ .ಹೆಣ್ಣು ಕುಲಕ್ಕೆ ಅಧಿದೇವತೆಯಾಗಿ ಹುಟ್ಟಿ ಬಂದ ಅಕ್ಕಮಹಾದೇವಿಯವರ ದಿಟ್ಟ ನಿಲುವು ಅತ್ಯದ್ಭುತ.
ಅಂದಿನ ಪುರುಷ ಪ್ರಧಾನ ಸಮಾಜದ ಮೌಲ್ಯಗಳ ವಿರುದ್ಧ ಪ್ರತಿಭಟನೆಯ ವಚನಗಳ ಧ್ವನಿ ಅರ್ಥಪೂರ್ಣ.
ಶ್ರೀಶೈಲದ ಚೆನ್ನಮಲ್ಲಿಕಾರ್ಜುನನೇ ತನ್ನ ಪತಿಯೆಂದು ನಂಬಿದ ಅಕ್ಕಮಹಾದೇವಿಯವರು .
ಜ್ಞಾನದ ಪಥವನ್ನು ಬಯಸುತ್ತಾರೆ .ಆ ಜ್ಞಾನದ ಮಾರ್ಗವೇ ಅರಿವು .ಆ ಅರಿವೇ ತನ್ನ ಪತಿ ಎಂದು ಹೇಳುವ ಅಕ್ಕಮಹಾದೇವಿಯವರ ವೈಚಾರಿಕತೆ ನಮ್ಮನ್ನು ಆಳಕ್ಕೀಳಿಸಿ ಬಿಡುತ್ತದೆ .
ಈ ಅರಿವಿನ ಜ್ಞಾನದ ಸಂಕೇತದ ಪತಿಯನ್ನು ಕಾಣುವ ಹಂಬಲ .ಎಂಥಹ ಸವಾಲನ್ನಾದರೂ ಎದುರಿಸಲು ಸಿದ್ಧವಾಗಿ ನಿಲ್ಲುವುದು .
ಅದನ್ನೇ ಅಕ್ಕಮಹಾದೇವಿಯವರ ಈ ಒಂದು ವಚನದಲ್ಲಿ ಕಾಣಬಹುದಾಗಿದೆ .
ಅಶನದಾಶೆಯಂ ತೃಷೆಯಂ ತೃಷೆಯಂ
 ಬೆಸನದ ಬೇಗೆಯಂ

ಓ ಚೆನ್ನಮಲ್ಲಿಕಾರ್ಜುನ ನಿನಗಾಗಿ  ನಿನ್ನನ್ನು ಕಾಣುವ ಬಯಕೆಯಿಂದ ನಾನು ನನ್ನ ಹಸಿವೆಯನ್ನೇ ಮರೆತಿದ್ದೇನೆ .ನನಗೆ ನೀರಿನ ದಾಹವೂ ಇಲ್ಲ .ನೀರು ಕುಡಿಯುವುದನ್ನೇ ಮರೆತು ಬಿಟ್ಟಿರುವೆ ಓ ಚೆನ್ನಮಲ್ಲಿಕಾರ್ಜುನಾ .ಬಳಲಿಸದಿರು ಎನ್ನ ಬಳಿ ಬಂದು ಮೊಗ ತೋರು ಎನ್ನೋಡೆಯಾ .
ನನಗೆ ಯಾವುದೇ ತಾಪತ್ರಯಗಳು ಇಲ್ಲ .ಈ ಕುಡಿಯುವುದು ತಿನ್ನುವುದು ಇವುಗಳಿಂದಾಗಿಯೇ ಜನ ತೊಂದರೆಯನ್ನು ಅನುಭವಿಸುವರು .ಆದರೆ ನನಗೆ ಇದಾವುದರ ಪರಿವೇ ಇಲ್ಲ .ಓ ಚೆನ್ನಮಲ್ಲಿಕಾರ್ಜುನಾ ಎಂದು ಪರಿ ಪರಿಯಾಗಿ ಅಂಗಲಾಚಿ ಬೇಡಿಕೊಳ್ಳುವ ಅಕ್ಕಮಹಾದೇವಿಯರ ಮನ ನಮ್ಮನ್ನೂ ಕೂಡಾ ಕರಗಿಸುವಂತೆ ಮಾಡುತ್ತದೆ .
ವಿಷಯದ ವಿಹ್ವಳತೆಯಂ
 ತಾಪತ್ರಯಗಳ ಕಲ್ಪನೆಗಳಂಗೆಲಿದೆ

ಓ ಚೆನ್ನಮಲ್ಲಿಕಾರ್ಜುನಾ ನನಗೆ ಯಾವುದೇ ವಿಷಯಂಗಳದ ಲೋಲುಪತೆ ಇಲ್ಲ .ಈ ಕಾಮ ,ಕ್ರೋಧ, ಲೋಭ,ಮೋಹ,ಮದ ,ಮತ್ಸರವನ್ನೆಲ್ಲ ಮೂಟೆಯಲ್ಲಿ ಸುತ್ತಿ ಗಂಟು ಹಾಕಿ ವಗೆದಿರುವೆ. ನನಗೆ ಇವುಗಳ ಜಂಜಾಟ ಇಲ್ಲವೇ ಇಲ್ಲ .ಇವುಗಳನ್ನೆಲ್ಲ ಗೆದ್ದು ನಡೆಯುತ್ತಿರುವೆ ಓ ಚನ್ನಮಲ್ಲಿಕಾರ್ಜುನಾ .ಎನ್ನುವ
ಅಕ್ಕಳ ಗಟ್ಟಿ ಧ್ವನಿಯು ಆ ದೇವರಿಗೆ ಸೇರಬೇಕು .

ಹೇ ಚೆನ್ನಮಲ್ಲಿಕಾರ್ಜುನಾ ನನ್ನ ಮೊರೆಯನ್ನು ಆಲಿಸಯ್ಯ. ಎಂದು ಕೂಗುವ ಅವಳ ಭಾವ ಮನುಷ್ಯರೊಂದಿಗಿನ ಸಂಬಂಧ ಕಿತ್ತು ಒಗೆದು, ಬಯಲ ಸೀಮೆಯಾದ ಕದಡಿವನವನ್ನು ಹೊಕ್ಕು ನಡೆಯುವ ಅಕ್ಕಳ ಭಾವ ನಮಗಿಲ್ಲಿ ದಿಗಂಬರವಾಗಿ ಕಾಣುತ್ತದೆ .ಅಕ್ಕಳ ಪಂಚೇಂದ್ರೀಯಂಗಳು ದಿಗಂಬರವಾಗಿ ನಿಲ್ಲುತ್ತವೆ.

ಇನ್ನೇನಿನ್ನೇನಿಚ್ಚೆಯಾದುದು
 ಚೆನ್ನಮಲ್ಲಿಕಾರ್ಜುನ ನಿನಗಂಜಿ ಅಂಜಿ

ಹೇ ಚೆನ್ನಮಲ್ಲಿಕಾರ್ಜುನಾ ನನಗೆ ಈ  ಸಂಸಾರ, ಈ ವಿಷಯದಿಂದಾಗುವ ಚಂಚಲತೆ ಇಲ್ಲವಾಗಿದೆ .ಸಂಸಾರ ದುಃಖವೇ ಇಲ್ಲವಾಗಿದೆ .ಇನ್ನು ಇರುವುದೆಲ್ಲವೂ ಎನ್ನ ಇಚ್ಚೆಯಂತೆಯೇ ಆಗುವುದು .ಹೀಗಾಗಿ ನಾನು ನಿನಗೆ ಅಂಜಲಾರೆ. ಅಳುಕಲಾರೆ ಚೆನ್ನಮಲ್ಲಿಕಾರ್ಜುನಾ ಎಂದು ಅಕ್ಕಮಹಾದೇವಿಯವರು ಹೇಳಿರುವುದನ್ನು ನಾನಿಲ್ಲಿ ಈ ವಚನದಲ್ಲಿ ಕಂಡುಕೊಂಡಿರುವೆ .
_______———————————

Leave a Reply

Back To Top