ಭಾವಯಾನಿ ಅವರ ಕವಿತೆ-ನಾನು ಮತ್ತು ಅವಳು

ನಾನು ನಗುತ್ತಲೇ ಇದ್ದೆ,
ಒಳಗೆ ನೋವಿನ ಅಗ್ನಿಜ್ವಾಲೆ ಸುಡುತಿದ್ದರೂ
ನನ್ನ ತುಟಿಗಳಲ್ಲಿ ಮಂದಹಾಸವಿತ್ತು
ಮತ್ತು ನನಗದು ಅನಿವಾರ್ಯವಾಗಿತ್ತು!

ಎದೆಗೊಳವ ಕಲಕಲೆಂದೆ ನೀವಾಡುವ ಮಾತಿಗೆ
ವಿಷಾದವೆನಿಸುತ್ತದೆ
ನಗುವ ಅಳಿಸಿ ಕಂಬನಿಯ ಛಾಯೆ
ಮೂಡುವಂತೆ ಮಾಡುವ
ನಿಮ್ಮ ಹಿರಿತನಕ್ಕೆ ಅಯ್ಯೋ ಅನಿಸುತ್ತದೆ ಕೂಡ!!

ಸಾಂತ್ವನದ ಮಾತು ಹೇಳುತ್ತಲೇ
ನನ್ನನ್ನಪ್ಪಿಕೊಂಡು
ಬೆನ್ನ ತುಂಬಾ ನಂಜಿನ ಗೀರು ಹಾಕಿದವರು ನೀವು!
ಮನದ ತುಂಬಾ ವಿಷವೇ ತುಂಬಿಕೊಂಡಿದ್ದರೂ
ನೀವು ನನ್ನೆದುರು ಬಂದಾಗ
ಮುಖ ಗಂಟಾಗುವುದಿಲ್ಲ
ಕಾರಣ, ಪ್ರೀತಿಯಿಂದ ವಿಷವನ್ನೇ
ಅಮೃತವಾಗಿಸಬಹುದು ಎಂಬ, ನಂಬಿಕೆ ಇನ್ನೂ ನನಗೆ!

ನನ್ನ ಅಳು, ನಗು ಇವೆರಡು ಮುಖಗಳೂ
ನಿಮ್ಮೆದುರು ನಾಟಕೀಯವಷ್ಟೇ!
ಕೆಟ್ಟವಳೆಂದು ಜರಿದುಕೊಳ್ಳಬೇಡಿ
ನಾ ತೆರೆದುಕೊಳ್ಳುವುದು ಕನ್ನಡಿ ಮುಂದಷ್ಟೇ…
ಕಾರಣ ಆಪ್ತ ಸ್ನೇಹಿತೆ,
ಅವಳಿನ್ನೂ ನನ್ನ ನೋಡಿ
ಅಸೂಯೆಯ ನಗು ನಕ್ಕಿಲ್ಲ!!


Leave a Reply

Back To Top