ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಯಶಸ್ಸಿನ ಸೂತ್ರಗಳು
ಪ್ರತಿಯೊಬ್ಬರೂ ಬದುಕಿನಲ್ಲಿ ಯಶಸ್ಸನ್ನು ಪಡೆಯಬೇಕು ಎಂದು ಆಶಿಸುವವರೇ. ಎಲ್ಲವೂ ಸುಲಭವಾಗೇ ಸಿಗಬೇಕೆಂದು ಬಯಸುವವರು ಕೂಡ
ಯಶಸ್ಸನ್ನು ಕೂಡ ಕಡಿಮೆ ಅಂದಾಜು ಮಾಡುತ್ತಾರೆ. ಕಷ್ಟಪಟ್ಟು ದುಡಿಯೋ ಮೊದಲೇ ದಣಿಯುವವರು, ಎಲ್ಲದಕ್ಕೂ ತಮ್ಮ ಹಣೆಬರಹ ಸರಿ ಇಲ್ಲ ಎಂದು ಅದೃಷ್ಟವನ್ನು ಹಳಿಯುವವರು, ಅಯ್ಯೋ ನಾವು ಪಡೆದುಕೊಂಡು ಬಂದಿಲ್ಲ ಎಂದು ಹೇಳುವವರು ಅರಿಯದ ಸಂಗತಿಯೊಂದಿದೆ.
ನಾವು ದುಡಿಯುವ ಹಣಕ್ಕೆ ಕಂದಾಯ ಕಟ್ಟುವಂತೆ
ಯಶಸ್ಸನ್ನು ಪಡೆಯಲು ಕೂಡ ನಾವು ಕೆಲ ಕಂದಾಯಗಳನ್ನು ಕಟ್ಟಬೇಕಾಗುತ್ತದೆ… ಅವು ಹಣದ ರೂಪದಲ್ಲಿ ಇರುವುದಿಲ್ಲ ಆದರೆ ಯಶಸ್ಸನ್ನು ಗಳಿಸಲು ಅದರದ್ದೇ ಆದ ಕೆಲವು ಮಾನದಂಡಗಳಿವೆ.
ಅಂತಹ ಯಶಸ್ಸನ್ನು ಗಳಿಸಲು ಅವಶ್ಯಕ ಸೂತ್ರಗಳನ್ನು ನಾವು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು.
* ಅವಶ್ಯಕತೆಗಳನ್ನು ಅರಿತುಕೊಳ್ಳಿ.
ಯಶಸ್ಸನ್ನು ಪಡೆಯಲು ನಿಜವಾಗಿಯೂ ನೀವು ಏನು ಬಯಸುವಿರಿ ಎಂಬುದನ್ನು ಸಾಕಷ್ಟು ಸಮಯ ಯೋಚಿಸಿ ಒಂದು ನಿರ್ಧಾರಕ್ಕೆ ಬನ್ನಿ. ಇದು ನಿಮಗೆ ಸ್ಪಷ್ಟತೆಯನ್ನು ನೀಡುವ ಮೂಲಕ ಉತ್ತಮ ನಿರ್ಣಯಗಳನ್ನು ಕೈಗೊಳ್ಳಲು, ಸಮಯ ನಿರ್ವಹಣೆ ಮತ್ತು ಶಕ್ತಿ ಸಾಮರ್ಥ್ಯಗಳನ್ನು ಒಗ್ಗೂಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.
* ಗೊಂದಲಗಳನ್ನು ನಿವಾರಿಸಿಕೊಳ್ಳಿ ಯಶಸ್ಸಿನೆಡೆಗಿನ ಪಯಣದ ಹಾದಿಯಲ್ಲಿ ನಿಮ್ಮನ್ನು ಗೊಂದಲಕ್ಕೆ ಈಡು ಮಾಡುವ, ನಿಮ್ಮ ಪಯಣದ ಹಾದಿಯಲ್ಲಿ ಮುಳ್ಳಾಗುವ, ನಿಮ್ಮನ್ನು ವಿಮುಖಗೊಳಿಸುವ ಸಂಗತಿಗಳಿಂದ ದೂರವಿರಿ ಇಲ್ಲವೇ ಆ ಸಂಗತಿಗಳಿಗೆ ಬಳಸುವ ಸಮಯವನ್ನು ಕಡಿಮೆಗೊಳಿಸಿ. ಉದಾಹರಣೆಗೆ ಸಾಮಾಜಿಕ ಜಾಲತಾಣಗಳ ಬಳಕೆ, ಅವುಗಳು ತೋರಿಸುವ ನೋಟಿಫಿಕೇಶನ್ ಗಳು ಕೇವಲ ಐದು ನಿಮಿಷ ನೋಡುತ್ತೇನೆ ಎಂದು ಗಂಟೆಗಟ್ಟಲೆ ಅವುಗಳಲ್ಲಿಯೇ ಮುಳುಗಿಬಿಡುವುದು ನಮ್ಮ ಸಮಯ ಮತ್ತು ಶಕ್ತಿಯನ್ನು ವ್ಯಯಿಸುತ್ತವೆ.
* ಅವಶ್ಯಕ ವಿಷಯಗಳ ಕಡೆ ಗಮನಹರಿಸಿ… ಅವಶ್ಯಕ ವಿಷಯಗಳನ್ನು ಮಾತ್ರ ಆಲಂಗಿಸುವ ಮತ್ತು ಅನವಶ್ಯಕ ಸಂಗತಿ ಮತ್ತು ಒಪ್ಪಂದಗಳನ್ನು ಗಳನ್ನು ದೂರವಿರಿಸುವ ಮೂಲಕ ನಿಮ್ಮ ಸಮಯ ಮತ್ತು ಶ್ರಮವನ್ನು ಉಳಿಸಿಕೊಳ್ಳಿ.
ಹಂಸ ಕ್ಷೀರ ನ್ಯಾಯ ಎಂಬ ಮಾತನ್ನು ನೀವು ಕೇಳಿರಬಹುದು. ನೀರು ಬೆರೆತ ಹಾಲಿನಲ್ಲಿ ಕೇವಲ ಹಾಲನ್ನು ಮಾತ್ರ ಸೇವಿಸುವ ಹಂಸ ಪಕ್ಷಿಯಂತೆ ಸಾಧನೆಯ ಹಾದಿಯಲ್ಲಿ ನಡೆಯಬಯಸುವವರು
ಅನವಶ್ಯಕ ಹರಟೆ, ಸಾಮಾಜಿಕ ಸಂವಹನಗಳಲ್ಲಿ ಭಾಗಿಯಾಗುವುದನ್ನು ತಪ್ಪಿಸಿಕೊಳ್ಳಬೇಕು.
( ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿಯೊಬ್ಬರು ಅಪಘಾತ ಒಂದರಲ್ಲಿ ಮಗಳನ್ನು ಕಳೆದುಕೊಂಡರು. ಬಹುತೇಕ ಹಾಸಿಗೆ ಹಿಡಿದ ಪತ್ನಿಯ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ವ್ಯಸ್ತರಾಗಿ ಆ ವರ್ಷ ಯಾವುದೇ ರೀತಿಯ ಸಾಧನೆ ತೋರಲಿಲ್ಲ ಎಂದು ಅವರನ್ನು ಗೌರವಪೂರ್ವಕವಾಗಿ ಕೆಲಸದಿಂದ ತೆಗೆದು ಹಾಕಿದ ಘಟನೆಯನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು. ನಮ್ಮಲ್ಲಿ ಚಿಕ್ಕ ಪುಟ್ಟ ಪ್ರಶಸ್ತಿಗಳು ಬಂದಾಗ ಕೂಡ ದಿನದ ಬಹು ಭಾಗ ಸಭೆ ಸಮಾರಂಭಗಳಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸುವ ವ್ಯಕ್ತಿ ತನ್ನ ಯಶಸ್ಸಿನ ಪಯಣದಿಂದ ವಿಮುಖನಾಗುತ್ತಾನೆ, ಆದ್ದರಿಂದಲೇ ಮಹಾನ್ ವ್ಯಕ್ತಿಗಳು ಸರ್ವ ಶ್ರೇಷ್ಟ ಪ್ರಶಸ್ತಿಗಳು ತಮಗೆ ದೊರೆತಾಗಲೂ ಕೂಡ ಸಾಮಾಜಿಕ ನಿರ್ಲಿಪ್ತಿಯನ್ನು ಸಾಧಿಸುತ್ತಾರೆ ಯಾಕೆಂದರೆ ಅವರ ಯಶಸ್ಸಿನ ಪಯಣ ಕೇವಲ ಪ್ರಶಸ್ತಿಯನ್ನು ಪಡೆಯಲು ಇರುವುದಿಲ್ಲ ಎಂಬುದರ ನಿಚ್ಚಳ ಅರಿವು ಅವರಿಗೆ ಇರುತ್ತದೆ.
* ಸ್ಪಷ್ಟ ಗುರಿಗಳನ್ನು ಹೊಂದಿರಬೇಕು… ನಿಮ್ಮ ಅವಶ್ಯಕತೆಗಳಿಗೆ ಸರಿಹೊಂದುವ ಸ್ಪಷ್ಟ ಮತ್ತು ನಿರ್ದಿಷ್ಟ ಯೋಜನೆಗಳನ್ನು ಹೊಂದುವ ಮೂಲಕ ನೀವು ಸದಾ ನಿಮ್ಮ ಗುರಿಯೆಡೆ ಲಕ್ಷ್ಯ ವಹಿಸಲು ಸಾಧ್ಯವಾಗುತ್ತದೆ.
* ದಿನಚರಿಯನ್ನು ರೂಡಿಸಿಕೊಳ್ಳಿ… ನಿಗದಿತ ದಿನಚರಿಯು ರಚನಾತ್ಮಕತೆ ಮತ್ತು ನಿಯಮಿತತೆಯನ್ನು ತಂದುಕೊಡುತ್ತದೆ. ಸರಿಯಾದ ದಿನಚರಿಯನ್ನು ಅಳವಡಿಸಿಕೊಂಡಾಗ ಅವಶ್ಯಕತೆಗೆ ಸಮಯವನ್ನು ಹೊಂದಿಸಿಕೊಳ್ಳುವುದನ್ನು ರೂಡಿಸಿಕೊಳ್ಳಬಹುದು ಮತ್ತು ಅನವಶ್ಯಕ ದಣಿವಾಗುವುದನ್ನು ತಪ್ಪಿಸಬಹುದು
*ಸರಳತೆಯನ್ನು ರೂಡಿಸಿಕೊಳ್ಳಿ….ಅನವಶ್ಯಕ ವಸ್ತುಗಳನ್ನು ಮತ್ತು ವಿಷಯಗಳನ್ನು ಸಂಗ್ರಹಿಸದಿರಿ. ನಿಮಗೆ ಬೇಡವೆನಿಸಿದ, ಮನೆಯಲ್ಲಿ ಸ್ಥಳವನ್ನು ಆಕ್ರಮಿಸುವ ಅನಗತ್ಯ ವಸ್ತುಗಳನ್ನು ಇಟ್ಟುಕೊಳ್ಳಬೇಡಿ. ಭೌತಿಕ ವಸ್ತುಗಳು ಮಾತ್ರವಲ್ಲ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳನ್ನು, ಕೂಡ ಹೊಂದಿರಬಾರದು. ಅನವಶ್ಯಕ ಹೊಂದಾಣಿಕೆಗಳನ್ನು ಮಾಡಿಕೊಳ್ಳಬಾರದು.
*ಧ್ಯಾನಪೂರ್ವಕವಾಗಿ ಕಾರ್ಯನಿರ್ವಹಿಸಿ… ಧ್ಯಾನ ಎಂಬುದು ಯೋಗದ ಭಾಗ ಮಾತ್ರ ಎಂಬ ಮೌಢ್ಯ ಖಂಡಿತ ಬೇಡ. ತನು ಮನ ಪೂರ್ವಕವಾಗಿ ಕಾರ್ಯನಿರ್ವಹಿಸಿ. ನಿಮ್ಮ ಯೋಚನೆಗಳು ಭಾವನೆಗಳು ಮತ್ತು ನಿಮ್ಮ ಸುತ್ತಣ ಪರಿಸರದ ಕುರಿತು ಯಾವಾಗಲೂ ಗಮನವಿರಲಿ. ಇದರಿಂದ ನೀವು ನಿಮ್ಮ ಕೆಲಸದಲ್ಲಿ ಉದ್ದೇಶಪೂರ್ವಕ ಆಯ್ಕೆಗಳನ್ನು ಮಾಡಬೇಕು.
*ನಿಮ್ಮ ಮನೋ ದೈಹಿಕ ಆರೋಗ್ಯದ ಕಾಳಜಿ ಮಾಡಿಕೊಳ್ಳಿ. ದೈಹಿಕ ವ್ಯಾಯಾಮ, ಸತ್ವಯುತ ಆಹಾರ, ಗುಣಮಟ್ಟದ ನಿದ್ರೆ ಮತ್ತು ವಿಶ್ರಾಂತಿಯನ್ನು ಹೊಂದುವುದರ ಮೂಲಕ ದೈಹಿಕ ಶಕ್ತಿ ಮತ್ತು ಸಾಮರ್ಥ್ಯಗಳನ್ನು ಹೊಂದಿರಬೇಕು.
ಬೇಡ ಎಂದು ಹೇಳುವುದನ್ನು ರೂಢಿಸಿಕೊಳ್ಳಿ… ಆಯ್ಕೆಯ ವಿಷಯದಲ್ಲಿ ತುಂಬಾ ಜಾಗರೂಕರಾಗಿರಿ. ಅನವಶ್ಯಕ ವಿಷಯಗಳಿಗೆ ಯಾವುದೇ ಮುಜುಗರ, ಭಿಡೆಗಳನ್ನು ಹೊಂದದೆ ನಿರಾಕರಿಸುವ ಮೂಲಕ ನಿಮ್ಮ ಸಮಯವನ್ನು ಉಳಿಸಿಕೊಳ್ಳಿ ಮತ್ತು ಗುರಿಯನ್ನು ತಲುಪಲು ಪ್ರಯತ್ನಿಸಿ.
ನಿರಂತರ ಮೌಲ್ಯಮಾಪನ ಮತ್ತು ಹೊಂದಾಣಿಕೆಯನ್ನು ರೂಢಿಸಿಕೊಳ್ಳಿ.. ಆದಾಗ ನಿಮ್ಮ ಅವಶ್ಯಕತೆಗಳು ಗುರಿ ಮತ್ತು ಬದ್ಧತೆಗಳ ಕುರಿತು ಅವಲೋಕನ ಮಾಡಿಕೊಳ್ಳಿ. ನಿಮ್ಮ ಗುರಿಯೆಡೆಗೆ ತಲುಪುವ ಹಾದಿಗೆ ಅನುಕೂಲವಾಗುವಂತೆ ಹೊಂದಾಣಿಕೆ ಮಾಡಿಕೊಳ್ಳಿ.
ಯಶಸ್ಸಿನ ಹಾದಿ ಎಂದೂ ಹೂವಿನ ಹಾಸಿಗೆಯಲ್ಲ ಎಂಬುದು ಕ್ರಮಿಸುವವರಿಗೆ ಮಾತ್ರ ಗೊತ್ತು. ಯಶಸ್ಸಿನ ಹಾದಿಯಲ್ಲಿ ಪಯಣಿಸುವವರು ಬೇರೆಯವರು ತಮ್ಮತ್ತ ಎಸೆಯುವ ಪ್ರತಿಯೊಂದು ಕಲ್ಲನ್ನು ಎಣಿಸುತ್ತಾ ಕುಳಿತರೆ ಪಯಣ ಕುಂಠಿತವಾಗುತ್ತದೆ. ತಮ್ಮತ್ತ ಎಸೆಯಲ್ಪಟ್ಟ ಪ್ರತಿಯೊಂದು ಕಲ್ಲನ್ನು ಮೆಟ್ಟಿಲನ್ನಾಗಿಸಿ ಮೇಲೆ ಹತ್ತುವ ಜಾಣ್ಮೆ ತಮಗಿರಬೇಕು..
ಖಂಡಿತವಾಗಿಯೂ ಯಶಸ್ಸು ದೊರೆಯುತ್ತದೆ.
ಆದರೆ ಅಂತಿಮವಾಗಿ ಒಂದು ಮಾತು… ಏರಿದವನು ಚಿಕ್ಕವನಿರಲೇಬೇಕು ಎಂಬ ಮಾತನ್ನು ಸಾರುವನು… ಎಂದು ಸೂರ್ಯನ ಕುರಿತು ನಮ್ಮ ಕನ್ನಡದ ಕವಿಗಳು ಹಾಡಿ ಹೊಗಳಿದಂತೆ ಅದೆಷ್ಟೇ ಯಶಸ್ಸಿನ ಅಲೆಯಲ್ಲಿ ತೇಲಾಡಿದರೂ ನಾವು ವಿನಮ್ರರಾಗಿರಬೇಕು.
ತುಂಬಿದ ಕೊಡ ತುಳುಕುವುದಿಲ್ಲ ಎಂದು ಹೇಳುವುದು ಇದೇ ಕಾರಣಕ್ಕೆ ಎಂಬುದನ್ನು ಅರಿತು
ನಮ್ಮ ಯಶಸ್ಸಿನ ಕುರಿತು ಅಹಂಭಾವದಿಂದ ಮೆರೆಯದೇ ವಿನೀತರಾಗಿರಬೇಕು. ನಮ್ಮ ಕತ್ತಿನ ಮೇಲೆಯೇ ನಮ್ಮ ತಲೆ ಇರಬೇಕು.
————————————————–
ವೀಣಾ ಹೇಮಂತ್ ಗೌಡ ಪಾಟೀಲ್