ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ರಾಷ್ಟ್ರೀಯ ದತ್ತು ದಿನಾಚರಣೆ ದಿನ
(23 ನವೆಂಬರ್)
ಮದುವೆಯಾಗಿ ಹಲವು ವರ್ಷಗಳೇ ಕಳೆದು ಹೋಗಿದ್ದರೂ ಆ ದಂಪತಿಗಳ ಮಡಿಲು ತುಂಬಿಲ್ಲ. ಹಿರಿಯರ ಅಪೇಕ್ಷೆಯಂತೆ ಎಲ್ಲ ರೀತಿಯ ಹರಕೆ ಪೂಜೆ ಪುನಸ್ಕಾರಗಳನ್ನು ಮುಗಿಸಿರುವ ಆ ದಂಪತಿಗಳು ಇತ್ತ ವೈದ್ಯಕೀಯ ಸಲಹೆ ಮತ್ತು ಚಿಕಿತ್ಸೆಗಳಿಗೆ ಕೂಡ ಮೊರೆ ಹೋಗಿದ್ದಾರೆ. ಆಧುನಿಕ ತಂತ್ರಜ್ಞಾನದ ಮೂಲಕ ಮಕ್ಕಳನ್ನು ಪಡೆಯುವ ಅವರ ಪ್ರಯತ್ನ ವಿಫಲವಾಗಿದ್ದು ಹತಾಶ ಮನಸ್ಥಿತಿಯಲ್ಲಿರುವ ಅವರನ್ನು ಸ್ನೇಹಿತೆಯೊಬ್ಬಳು ದತ್ತು ಸ್ವೀಕಾರ ಕೇಂದ್ರಕ್ಕೆ ಕರೆದೊಯ್ದು ನೋಂದಣಿ ಮಾಡುವ ಮೂಲಕ ಬದುಕಿನಲ್ಲಿ ಹೊಸ ಆಶಾಕಿರಣವನ್ನು ಮೂಡಿಸಿದ್ದಾಳೆ.ದತ್ತು ಸ್ವೀಕಾರಕ್ಕೆ ಬೇಕಾದ ಎಲ್ಲ ದಾಖಲೆಗಳನ್ನು ಲಗತ್ತಿಸಿ ಸಂಬಂಧ ಪಟ್ಟ ಕಚೇರಿಗೆ ನೀಡಲಾಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಆರೋಗ್ಯವಂತ ಮಗು ಅವರ ಬಾಳಿನಲ್ಲಿ ಬೆಳಕು ತರಲಿದೆ.
ಹಾಗಾದರೆ ದತ್ತು ಸ್ವೀಕಾರ ಇಷ್ಟು ಸರಳವೇ ಎಂದು ಕೇಳಿದರೆ ಖಂಡಿತವಾಗಿಯೂ ಹೌದು ಎಂಬ ಉತ್ತರ ಅಧಿಕಾರಿಗಳಿಂದ ಬರುತ್ತದೆ.ಇತ್ತೀಚಿಗೆ ಮಾಜಿ ಮಿಸ್ ಯುನಿವರ್ಸ್ ಸುಶ್ಮಿತಾ ಸೇನ್ ಸಂದರ್ಶನ ಒಂದರಲ್ಲಿ ಹೇಳಿದ್ದು ಹೀಗೆ.ವಿವಾಹವಾಗಿರದ ಆಕೆ ಎರಡು ಹೆಣ್ಣು ಮಕ್ಕಳನ್ನುದತ್ತು ಪಡೆದುಕೊಂಡಿದ್ದಾಳೆ.
ಈ ಕುರಿತು ಆಕೆಯೊಂದಿಗೆ ಮಾತನಾಡಿದ ನ್ಯಾಯಾಧೀಶರು ಈ ಪತ್ರಕ್ಕೆ ನಾನು ಸಹಿ ಹಾಕಿದರೆ ಇದು ನಮ್ಮಿಬ್ಬರ ಬದುಕಿನ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಮುಂದೆ ನೀನು ವಿವಾಹವಾದರೆ ಅದು ನಿನ್ನ ವೈವಾಹಿಕ ಬದುಕಿನ ಮೇಲೆಯೂ ಪರಿಣಾಮ ಬೀರಬಹುದು ಎಂಬುದರ ಅರಿವಿದ್ದು ಕೂಡ ನೀನು ದತ್ತು ತೆಗೆದುಕೊಳ್ಳಲು ಬಯಸಿ ನ್ಯಾಯಾಲಯದ ಅನುಮತಿ ಪಡೆಯುತ್ತಿರುವೆ… ನಿನ್ನ ಈ ಕ್ರಿಯೆಗೆ ನಿನ್ನ ಪಾಲಕರ ಒಪ್ಪಿಗೆ ಇದೆಯೇ ಎಂಬ ಮಾತಿಗೆ
ಸುಶ್ಮಿತಾಸೇನ್ ರ ತಂದೆ ಯಾವ ತಂದೆ ತಾನೆ ತನ್ನ ಮಗಳು ಮದುವೆಯಾಗದೆ ಕೇವಲ ದತ್ತು ಸ್ವೀಕಾರದ ಮೂಲಕ ಮಕ್ಕಳನ್ನು ಪಡೆಯುವುದು ಇಷ್ಟವಾಗುತ್ತದೆಹೇಳಿ… ಆದರೆ ನನಗೆ ನನ್ನ ಮಗಳ ಮೇಲೆ ನಂಬಿಕೆ ಇದೆ. ಓರ್ವ ಒಳ್ಳೆಯ ನಾಗರಿಕ ಪ್ರಜ್ಞೆಯನ್ನು ಹೊಂದಿರುವ ಆಕೆ ಬಹಳ ಯೋಚಿಸಿ ಈ ನಿರ್ಧಾರಕ್ಕೆ ಬಂದಿದ್ದು ತಂದೆ ತಾಯಿಯಾಗಿ ನಮ್ಮೆಲ್ಲ ಸಹಕಾರಬೆಂಬಲ ಆಕೆಗೆ ಇರುತ್ತದೆ ನೀವು ನಿಶ್ಚಿಂತೆಯಿಂದ ಆಕೆಗೆ ಮಗುವನ್ನು ದತ್ತು ಕೊಡಲು ಅನುಮತಿ ನೀಡಿ ಎಂದು ಹೇಳಿದರು.ಇದು ದತ್ತು ಸ್ವೀಕಾರ ಪ್ರಕ್ರಿಯೆಯ ಮತ್ತೊಂದು ಮುಖ ಮಾತ್ರ.
ತಮ್ಮ ಮರಣದ ನಂತರ ತಮ್ಮ ವಂಶವನ್ನು ಮುಂದುವರಿಸಿಕೊಂಡು ಹೋಗಲು, ತಮ್ಮೆಲ್ಲ ಆಸ್ತಿಗೆ ವಾರಸುದಾರರು ಬೇಕು, ತಾವು ಸತ್ತ ನಂತರ ತಮ್ಮ ಉತ್ತರ ಕ್ರಿಯಾದಿಗಳನ್ನು ಮಾಡಲು, ತಮ್ಮ ಬದುಕನ್ನು ಬೆಳಗಲು ಮಕ್ಕಳು ಬೇಕು ಎಂಬ ಆಶಯ ಜಗತ್ತಿನ ಎಲ್ಲ ನಾಗರೀಕತೆಗಳಲ್ಲಿ ಕಂಡುಬಂದಿದ್ದು ಸಾಮಾಜಿಕವಾಗಿ ವೈವಾಹಿಕ ಬಂಧನವನ್ನು ಹೊಂದಿರುವ ಪ್ರತಿ ದಂಪತಿಗಳು ಬಯಸುವುದು ತಮ್ಮ ಸಾಂಗತ್ಯದ ಫಲವಾಗಿ ತಮ್ಮ ವಂಶವನ್ನು ಬೆಳಗುವ ಮಗುವನ್ನು. ಆದರೆ ಕಾರಣಾಂತರಗಳಿಂದ ಅವರಿಗೆ ಮಕ್ಕಳಾಗದೆ ಹೋದ ಪಕ್ಷದಲ್ಲಿ ಸಂಬಂಧಿಗಳ ಮಕ್ಕಳನ್ನು ದತ್ತು ಸ್ವೀಕಾರ ಪ್ರಕ್ರಿಯೆಯ ಮೂಲಕ ತಮ್ಮ ಮಕ್ಕಳನ್ನಾಗಿಸಿಕೊಳ್ಳುತ್ತಿದ್ದರು. ಇದು ರಾಜ ಮಹಾರಾಜರ ಕಾಲದಿಂದಲೂ ನಡೆದು ಬಂದಿತ್ತು.
ಬ್ರಿಟಿಷರ ಆಳ್ವಿಕೆಯಲ್ಲಿ ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ಎಂಬ ಕಾನೂನನ್ನು ಲಾರ್ಡ್ ಡಾಲ ಹೌಸಿಯು ಜಾರಿಗೆ ತಂದು ಇನ್ನಿಲ್ಲದ ರಾಜಕೀಯ ವಿಪ್ಲವಗಳಿಗೆ ಉತ್ಪಾತಗಳಿಗೆ ಕಾರಣನಾಗಿ ಅನೇಕ ಅರಸೊತ್ತಿಗೆಗಳನ್ನು ಹೇಳ ಹೆಸರಿಲ್ಲದಂತೆ ಅಳಿಸಿ ಹಾಕಿದನು.ಸ್ವಾತಂತ್ರ್ಯನಂತರದಲ್ಲಿ ನಮ್ಮದೇ ಆದ ಸಂವಿಧಾನವು ಜಾರಿಗೆ ಬಂದು ಕಾನೂನು ಕ್ರಮಗಳ ಮೂಲಕ ಕೆಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ದತ್ತು ಸ್ವೀಕಾರ ಮಾಡಬಹುದಾಗಿದೆ. ಮುಖ್ಯವಾಗಿ ಈ ಎರಡು ನಿಯಮಗಳು ಭಾರತದಲ್ಲಿ ದತ್ತು ಸ್ವೀಕಾರ ಪ್ರಕ್ರಿಯೆಯನ್ನು ಹೆಚ್ಚಿಸಿವೆ ಎಂದರೆ ಆಶ್ಚರ್ಯವಿಲ್ಲ.
1. ದತ್ತು ಸ್ವೀಕಾರ ಮಾಡಲಿಚ್ಚಿಸುವ ದಂಪತಿಗಳಿಗೆ ವೈದ್ಯಕೀಯ ಚಿಕಿತ್ಸೆಯ ದಾಖಲೆಗಳ ಪ್ರಕಾರ ಮಕ್ಕಳಾಗಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿರಬೇಕು.
2. ಅನಾಥ ಮಕ್ಕಳಿಗೆ ಒಂದು ಸುಭದ್ರ ಮತ್ತು ಸುಸ್ಥಿರ ಬದುಕನ್ನು ನೀಡುವ ಮೂಲಕ ಒಳ್ಳೆಯ ಭವಿಷ್ಯವನ್ನು ಕಲ್ಪಿಸಿಕೊಡುವುದು.
ಈ ಕಾಯ್ದೆಗಳ ಅನುಷ್ಠಾನದ ನಂತರ ಭಾರತ ದೇಶದಲ್ಲಿ ದತ್ತು ಸ್ವೀಕಾರ ಪ್ರಕ್ರಿಯೆಯು ಹೆಚ್ಚಾಗಿದ್ದು ಕಾರಣಾಂತರಗಳಿಂದ ಮಕ್ಕಳನ್ನು ಹೊಂದದ ಬಹಳಷ್ಟು ದಂಪತಿಗಳಿಗೆ ಇದು ವರದಾನವಾಗಿದೆ ಎಂದರೆ ತಪ್ಪಿಲ್ಲ.
ಸೆಂಟ್ರಲ್ ಅಡಾಪ್ಷನ್ ರಿಸೋರ್ಸ್ ಅಥಾರಿಟಿ(CARA)ಯು ಅಂತರ್ದೇಶಿಯ ಮತ್ತು ಅಂತರಾಷ್ಟ್ರೀಯ ದತ್ತು ಸ್ವೀಕಾರ ಪ್ರಕ್ರಿಯೆಗಳನ್ನುಕಾನೂನುಬದ್ಧವಾಗಿ ನೀಡುವ ಅಧಿಕಾರವನ್ನು ಹೊಂದಿದ್ದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಸಂಸ್ಥೆಯ ನಿಯಮಗಳ ಪ್ರಕಾರ ದತ್ತು ಸ್ವೀಕಾರ ಮಾಡಲು ಬಯಸುವ ದಂಪತಿಗಳು
1. ಭಾರತೀಯ, ಅನಿವಾಸಿ ಭಾರತೀಯ ಮತ್ತು ವಿದೇಶಿ ಪ್ರಜೆಗಳಿಗೆ ದತ್ತು ಪ್ರಕ್ರಿಯೆಯಲ್ಲಿ ಬೇರೆ ಬೇರೆ ನಿಯಮಗಳು ಅನ್ವಯವಾಗುತ್ತವೆ.
2 ವ್ಯಕ್ತಿಯು ಯಾವುದೇ ಲಿಂಗ ಮತ್ತು ವೈವಾಹಿಕ ಜೀವನವನ್ನು ಹೊಂದಿರಲಿ
3. ದತ್ತು ಸ್ವೀಕರಿಸುವ ದಂಪತಿಗಳು ಎರಡು ವರ್ಷಗಳ ಸುಸ್ಥಿರ ದಾಂಪತ್ಯವನ್ನು ಹೊಂದಿದ್ದು ದತ್ತು ಸ್ವೀಕಾರ ಪ್ರಕ್ರಿಯೆಗೆ ಇಬ್ಬರ ಒಪ್ಪಿಗೆಯೂ ಅವಶ್ಯಕ.
4. ದತ್ತು ಸ್ವೀಕರಿಸಲು ಇಚ್ಚಿಸುವ ದಂಪತಿಗಳು ಮತ್ತು ದತ್ತು ಪಡೆಯಲಿರುವ ಮಗುವಿನ ನಡುವಿನ ವಯಸ್ಸಿನ ಅಂತರ 25 ವರ್ಷಕ್ಕಿಂತ ಕಡಿಮೆ ಇರಬಾರದು.
5. ದತ್ತು ಸ್ವೀಕಾರ ಮಾಡಲು ಇಚ್ಚಿಸುವ ಪಾಲಕರು ದೈಹಿಕ, ಭಾವನಾತ್ಮಕ, ಮಾನಸಿಕ ಮತ್ತು ಆರ್ಥಿಕ ಸ್ಥಿರತೆಯನ್ನು ಹೊಂದಿರಬೇಕು.
6. ದತ್ತು ಸ್ವೀಕಾರ ಮಾಡಲಿಚ್ಚಿಸುವ ದಂಪತಿಗಳಿಗೆ ಯಾವುದೇ ರೀತಿಯ ಭೀಕರ ಖಾಯಿಲೆಗಳು ಇರಬಾರದು.
7. ಈಗಾಗಲೇ ಮೂರಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಪಾಲಕರಿಗೆ ದತ್ತು ಸ್ವೀಕಾರಕ್ಕೆ ಅವಕಾಶ ಇರುವುದಿಲ್ಲ,ಆದರೆ ಅವಶ್ಯಕವೆನಿಸಿದಾಗ ಆ ಮಕ್ಕಳಲ್ಲಿ ಆರೋಗ್ಯ ಸಂಬಂಧಿ ತೊಂದರೆಗಳು ಇದ್ದ ಸಂದರ್ಭದಲ್ಲಿ ಮಕ್ಕಳನ್ನು ದತ್ತು ಕೊಡಲು ಒಪ್ಪಿಗೆಯನ್ನು ಸೂಚಿಸಲಾಗುತ್ತದೆ.
8. ಯಾವುದೇ ಮಹಿಳೆಯು ಗಂಡು ಇಲ್ಲವೇ ಹೆಣ್ಣು ಮಕ್ಕಳನ್ನು ದತ್ತು ಪಡೆಯಬಹುದು.. ಆದರೆ ಪುರುಷನಿಗೆ ಹೆಣ್ಣು ಮಕ್ಕಳನ್ನು ದತ್ತು ಕೊಡಲು ಕಾನೂನಿನಲ್ಲಿ ಅವಕಾಶವಿಲ್ಲ.
9. 55 ವರ್ಷಕ್ಕಿಂತ ಮೇಲ್ಪಟ್ಟ ಏಕಾಂಗಿ ಪಾಲಕರಿಗೆ ಮಕ್ಕಳನ್ನು ದತ್ತು ಕೊಡಲು ಕಾನೂನು ಒಪ್ಪುವುದಿಲ್ಲ.
1956 ರ ಹಿಂದೂ ಆಡಾಪ್ಶನ್ ಅಂಡ್ ಮೆಂಟೇನೆನ್ಸ್ ಕಾಯ್ದೆಯ ಪ್ರಕಾರ ಕಾನೂನು ಮತ್ತು
ನ್ಯಾಯ ಮಂತ್ರಾಲಯದ ಅಡಿಯಲ್ಲಿ ದತ್ತು ಪಡೆಯಲು ಬಯಸುವ ದಂಪತಿಗಳು ದತ್ತು ಹೊಂದಲು ಬಯಸುವ ಮಗು ಎಲ್ಲರೂ ಭಾರತ ದೇಶದ ನಾಗರಿಕರಾಗಿರುವುದು ಕಡ್ಡಾಯವಾಗಿದೆ.
ಯಾವುದೇ ಅನಾಥ ಮಕ್ಕಳು ಇಲ್ಲವೇ ತಮ್ಮ ಮಕ್ಕಳನ್ನು ಸಾಕಲು ಸಾಧ್ಯವಾಗದ ಪರಿಸ್ಥಿತಿಯಲ್ಲಿರುವ ಪಾಲಕರ ಮಕ್ಕಳನ್ನು, ತಂದೆ ತಾಯಿಯರಿಂದ ದೂರ ಮಾಡಲ್ಪಟ್ಟ, ಕಳೆದು ಹೋದ ಮಕ್ಕಳನ್ನು ಪಾಲಕರು ಬಂದು ಕರೆದೊಯ್ಯದೆ ಇದ್ದ ಪಕ್ಷದಲ್ಲಿ ಅಂತಹ ಮಕ್ಕಳನ್ನು ಉತ್ತಮ ಭವಿಷ್ಯವನ್ನು ಹೊಂದಲಿ ಎಂಬ ದೃಷ್ಟಿಯಿಂದ ಆಸಕ್ತ ಮಕ್ಕಳಿಲ್ಲದ ಪಾಲಕರಿಗೆ ದತ್ತು ಕೊಡಬಹುದಾಗಿದೆ.
ಮಗುವನ್ನು ದತ್ತು ತೆಗೆದುಕೊಳ್ಳುವ ಪಾಲಕರು ಸರ್ಕಾರದಿಂದ ನೋಂದಾಯಿತ ದತ್ತು ಪ್ರಕ್ರಿಯೆ ಸಂಸ್ಥೆಗೆ ಅರ್ಜಿ ಹಾಕುವ ಮೂಲಕ ದತ್ತು ಪ್ರಕ್ರಿಯೆಗೆ ಚಾಲನೆ ನೀಡಬೇಕು. ದಂಪತಿಗಳಿಬ್ಬರ ಪಾಸ್ಪೋರ್ಟ್ ಸೈಜ್ ಫೋಟೋಗಳು ಅವರ ಆರೋಗ್ಯ, ಆದಾಯ,ಮನೆಯ ವಿಳಾಸ, ದತ್ತು ಪ್ರಕ್ರಿಯೆ ಕೈಗೊಳ್ಳಲು ಮೂರು ಜನ ಸರಕಾರಿ ನೌಕರರ ಅಧಿಕೃತ ಪತ್ರ ಕಾರಣವಾದ ಅಂಶಗಳು ಹೀಗೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಸಲ್ಲಿಸಬೇಕು.
ಮೂರು ತಿಂಗಳ ಅವಧಿಯ ಒಳಗಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸರ್ಕಾರಕ್ಕೆ ಅರ್ಜಿ ಹಾಕಿರುವ ಪಾಲಕರ ಮನೆಗೆ ಭೇಟಿ ನೀಡಿ ಪರಿಶೀಲಿಸಿ ನಂತರ ಮಗುವನ್ನು ದತ್ತು ಕೊಡುವ ಪ್ರಕ್ರಿಯೆಗೆ ಚಾಲನೆ ನೀಡಲೇಬೇಕು.
ತಮಗೆ ಬೇಕಾದ ಬಣ್ಣ ಮತ್ತು ತ್ವಚೆಯನ್ನು ಹೊಂದಿರುವ, ಲಿಂಗದ ಮತ್ತು ಒಳ್ಳೆಯ ಆರೋಗ್ಯವನ್ನು ಹೊಂದಿರುವ ಮಗುವನ್ನು ದತ್ತು ತೆಗೆದುಕೊಳ್ಳುವ ಹಕ್ಕು ದತ್ತು ತೆಗೆದುಕೊಳ್ಳಲು ಅಪೇಕ್ಷಿಸುವ ಪಾಲಕರಿಗೆ ಇರುತ್ತದೆ.
ಹೀಗೆ ತಾವು ಒಪ್ಪಿದ ಮಗು ದೊರೆತ ನಂತರ ದತ್ತು ಪ್ರಕ್ರಿಯೆ ಸಂಸ್ಥೆಯ ಸಿಬ್ಬಂದಿ ಪಾಲಕರು ಮತ್ತು ಮಗುವನ್ನು ವಕೀಲರ ಮೂಲಕ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಧೀಶರು ಹಾಕುವ ಶರತ್ತುಗಳಿಗೆ ಪಾಲಕರ ಒಪ್ಪಿಗೆಯ ಸಹಿ ನೀಡಲಾಗುತ್ತದೆ. ಪ್ರತಿ ಎರಡು ವರ್ಷಕ್ಕೊಮ್ಮೆ ಮಗುವಿನ ಸ್ಥಿತಿಗತಿಗಳ ಕುರಿತು ಸಂಸ್ಥೆಯವರು ವರದಿಯನ್ನು ತೆಗೆದುಕೊಳ್ಳುತ್ತಾರೆ.
ಭಾರತ ದೇಶದ ಸಾಕಷ್ಟು ಅನಾಥಾಲಯಗಳಲ್ಲಿ ನಿರ್ಗತಿಕ,ಅನಾಥ ಬಡ ಮಕ್ಕಳು ಇದ್ದು ಅವರಿಗೆ ಉತ್ತಮ ಬಾಳನ್ನು ನೀಡುವ ದೃಷ್ಟಿಯಿಂದ, ಮಕ್ಕಳಿಲ್ಲದೆ ನಿಸ್ಸಾರವಾದ ಬದುಕನ್ನು ಬದುಕುತ್ತಿರುವ ದಂಪತಿಗಳಿಗೆ ಆಶಾಕಿರಣವಾಗಿರುವ
ದತ್ತು ಪ್ರಕ್ರಿಯೆಯನ್ನು ಪ್ರೋತ್ಸಾಹಿಸಲೆಂದು ಪ್ರತಿವರ್ಷ ನವಂಬರ್ 23ರಂದು ರಾಷ್ಟ್ರೀಯ ದತ್ತು ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು ಈ ದತ್ತು ಪ್ರಕ್ರಿಯೆಯ ಮೂಲಕ ಅನಾಥ ಮಕ್ಕಳು ಮತ್ತು ಮಕ್ಕಳಿಲ್ಲದ ದಂಪತಿಗಳು ಪರಸ್ಪರರಿಗೆ ಪೂರಕವಾಗಿ ರಲಿ ಎಂಬ ಆಶಯದೊಂದಿಗೆ
ವೀಣಾ ಹೇಮಂತ್ ಗೌಡ ಪಾಟೀಲ್
Super mam
Savita Deshmukh