ಕಾವ್ಯ ಸಂಗಾತಿ
ನಿರ್ಮಲಾ ನಿಶೆ
‘ಅರ್ಥವಾಗದವನ ಪ್ರೀತಿಯ ಪರಿ’
ಹಸಿರೆಲೆಯ ಹಿಂಡಿನ ನಡುವೆ
ಕೆಂಪು ನೀಲ ಹಳದಿ ಹೂಗಳನು
ಅರಳಿಸಿ ಆಯ್ಕೆಯಲ್ಲಿ ಗೊಂದಲ ಮಾಡುವ ಅವನು
ಇಂತಹದೇ ಹೂ ಬೇಕೆನುವುದಿಲ್ಲ
ವಿಷಣ್ಣತೆಯ ಸಂಜೆಯ ಕಾವಿಗೆ
ಬೇಸರದಲಿ ಬಿರುಬೀಸಾಗಿ ಎಲ್ಲೆಲ್ಲೊ ಅಲೆವ
ಮನದ ವಿರಹಕೊಂದು
ತಣ್ಣನೆಯ ತಂಗಾಳಿ ತಂದು ತಬ್ಬುವ ಅವನು
ಗದರಿಸುವುದಿಲ್ಲ
ಆ ನೀರವ ರಾತ್ರಿಯಲಿ
ಮರದ ಹೂಗಳ ಕಿವಿಗೆ ಪಿಸುಮಾತ ಚೆಲ್ಲಿ
ನಡೆವಾ ಚಂದಿರನ ವೇದನೆಗೆ ನಿದ್ದೆಗೆಟ್ಟ
ನನ್ನ ಕಣ್ಣುಗಳಲ್ಲಿ ಕನಸು ಬಿತ್ತಿ ನಗುವ ಅವನು
ಪೀಡಿಸುವುದಿಲ್ಲ
ನಸುಕು ನಕ್ಕು ನಕ್ಕು ಬಿರಿವ
ಹೂಗಳ ಸದ್ದನು ಕತ್ತಾಲಿಸಲೆಂದೇ ಹರಗಾಡುವ ಥಂಡಿಗೆ
ಬುದ್ಧಿ ಕಲಿಸಲೆಂದೇ ತೇರನೇರಿ
ಹೊಸ ಹಾಡ ಹೊತ್ತು ಬರುವ ಅವನು
ನೋಯಿಸುವುದಿಲ್ಲ
ಹೀಗೆ ಅರ್ಥವಾಗಲು ಅವನ ಪ್ರೀತಿ
ತಡವಾಯಿತು
ನೋವು ತಾಗದ ಕೊನೆ
ಇರದ ನಗುವೊಂದು ನನ್ನೊಳಗಿಳಿಯಿತು
ನಿರ್ಮಲಾ ನಿಶೆ
ಸೊಗಸಾದ ಕಾವ್ಯ ಮೇಡಂ