ಕಾವ್ಯ ಸಂಗಾತಿ
ಎ.ಎನ್.ರಮೇಶ್.ಗುಬ್ಬಿ
‘ಭಾವಗಣಿತದ ಹನಿಗಳು’
- ಕಟು ಸತ್ಯ.!
ಗಡಿಯಾರ ಕಟ್ಟಿಕೊಂಡವರಿಗೆಲ್ಲ
ಸಮಯವದು ಕೈಗೆ ಸಿಕ್ಕಿಲ್ಲ.!
ಗಣಿತ ಅರೆದು ಕುಡಿದವರಿಗೆಲ್ಲ
ಬದುಕಿನ ಲೆಕ್ಕಗಳು ದಕ್ಕಿಲ್ಲ.!
- ಅಸಾಧ್ಯ.!
ಟಿಕ್ ಟಿಕ್ ಎನ್ನುವ ಗೋಡೆ ಗಡಿಯಾರ
ನಿಂತರೆ ಮತ್ತೆ ಚಲಾಯಿಸಲು ಷೆಲ್ಲುಂಟು.!
ಲಬ್ ಡಬ್ ಎನ್ನುವ ಎದೆ ಗಡಿಯಾರ
ನಿಂತರೆ ಚಲಾಯಿಸುವ ಷೆಲ್ಲು ಎಲ್ಲುಂಟು?
- ಬಾಳಗಣಿತ.!
ಆಗುತ್ತಿದ್ದರಷ್ಟೇ ಭಾವಗಳ ನಿತ್ಯ ನವೀಕರಣ
ಅರ್ಥವಾಗಬಲ್ಲುದು ಬದುಕಿನ ಸಮೀಕರಣ.!
ಅರಿತರಷ್ಟೇ ಬಂಧಾನುಬಂಧಗಳ ಪ್ರಮೇಯ
ಸಾಕಾರವಾದೀತು ಬಾಳಿನ ಗಣಿತದ ವಿಸ್ಮಯ.!
- ಅಗಣಿತ.!
ಲೆಕ್ಕವಿಟ್ಟವುರುಂಟೆ ಹೃದಯದ ಒಟ್ಟು ಬಡಿತ
ಬಲ್ಲವರುಂಟೆ ಬಡಿತದ ಸಂಖ್ಯಾಸೂತ್ರ ಗಣಿತ
ಬಡಿತದ ಜೊತೆಗೆ ನಿರಂತರ ಭಾವಗಳ ಮಿಡಿತ
ಬಡಿತ ಮಿಡಿತ ತುಡಿತಗಳ ಲೆಕ್ಕವದು ಅಗಣಿತ.!
- ಮಿತಿ
ಆಗರ್ಭ ಶ್ರೀಮಂತನಾದರೂ
ಗಡಿಯಾರವನಷ್ಟೇ ಕೊಳ್ಳಬಲ್ಲ
ಕಾಲವನ್ನಲ್ಲ ಸಮಯವನ್ನಲ್ಲ
ಅಪೂರ್ವ ಹೃದಯತಜ್ಞನಾದರೂ
ಹೃದಯವನಷ್ಟೇ ಸರಿಪಡಿಸಬಲ್ಲ
ಭಾವಗಳನಲ್ಲ ಭಾಷ್ಯಗಳನಲ್ಲ.!
- ಲೆಕ್ಕ.!
ಕಳೆಯಲಷ್ಟೇ ಬಲ್ಲವನಿಗೆ
ಬಾಳು ಮೋಜಿನ ಹುಕ್ಕ
ಕೂಡಲಷ್ಟೇ ಬಲ್ಲವನಿಗೆ
ಬಾಳು ಮರೀಚಿಕೆ ಪುಕ್ಕ.!
ಎರಡು ಬಲ್ಲರಷ್ಟೆ ದಕ್ಕೀತು
ಪೂರ್ಣ ಬದುಕಿನ ಲೆಕ್ಕ.!
ಎ.ಎನ್.ರಮೇಶ್.ಗುಬ್ಬಿ.