ನಾಗರಾಜ ಜಿ. ಎನ್. ಬಾಡ ‘ಮಾತು’ ಕವಿತೆ

ಮಯೋದೊಳಗಿನ ಮಾತು
ಮನದಲ್ಲಿಯೇ ಅವಿತಿಟ್ಟಿದ್ದೇನೆ
ಮನಸ್ಸಿಗಾದ ನೋವು ಅಘಾತ
ತಣ್ಣಗೆ ತನ್ನಷ್ಟಕ್ಕೇ ವಾಸಿಯಾಗಲೆಂದು

ಏಕಾಂತವನ್ನು ಅಪ್ಪಿಕೊಂಡಿದ್ದೇನೆ
ಯಾರಿಗೂ ನೋವಾಗದಿರಲೆಂದು
ನನ್ನೊಳಗಿನ ನೋವುಗಳು
ನನ್ನಲ್ಲಿಯೇ ಕರಗಿ ಹೋಗಲೆಂದು

ಒಬ್ಬನೇ ದೂರ ದೂರಕ್ಕೆ
ಹೆಜ್ಜೆಗಳನ್ನು ಹಾಕಿ ದಣಿದಿದ್ದೇನೆ
ನನ್ನ ಸ್ವಗತದ ಮಾತುಗಳು
ಯಾರಿಗೂ ಹೇಳಬಾರದೆಂದು

ಮನದ ನೋವು ಹೆಚ್ಚಾದಾಗ
ಏಕಾಂತದಿ ಸಮುದ್ರದಡದಿ ಕುಳಿತು
ಆಗಸದ ನಕ್ಷತ್ರಗಳ ಎಣಿಸಿದ್ದೇನೆ
ಮನದಲ್ಲಿನ ಅಲೆ ದೂರಾಗಲೆಂದು

ಯಾರ್ಯಾರದೋ ಖುಷಿಗಾಗಿ
ನನ್ನ ನೋವುಗಳನ್ನು ಅದುಮಿಟ್ಟಿದ್ದೇನೆ
ಇನ್ನೊಬ್ಬರ ಮನದ ಭಾವನೆಗಳಿಗೆ
ನೋವು ಬಾರದಿರಲೆಂದು

ಬೆಳಕಿಗಿಂತ ಕಡು ಕತ್ತಲೆಯನ್ನೇ
ಹೆಚ್ಚು ಹೆಚ್ಚು ಪ್ರೀತಿಸುತ್ತೇನೆ
ನನ್ನೊಳಗಿನ ಹತಾಶೆಯ ಭಾವನೆಗಳು
ಯಾರಿಗೂ ತೋರದಿರಲೆಂದು

ಈಗೀಗ ಮಾತನಾಡುವುದನ್ನ
ನನ್ನೊಳಗೆ ಮಾತನಾಡಿಕೊಳ್ಳುತ್ತೇನೆ
ಮೌನ ನೀಡುವ ಸುಖವನ್ನು
ಮಾತುಗಳು ನೀಡುವುದಿಲ್ಲವೆಂದು

ಕಲ್ಲಂತೆ ಕುಳಿತು ಮೌನವಾಗುರುತ್ತೇನೆ
ನನ್ನೊಳಗೆ ನಾನು ಧ್ಯಾನಿಸುತ್ತೇನೆ
ನನ್ನಲ್ಲಿನ ಸರಿ ತಪ್ಪುಗಳ ಮಂಥಿಸಲು
ನನ್ನೊಳಗಿನ ನಾನು ಜೀವಿಸಲು

ಯಾರ ಬಗ್ಗೆಯೂ ದ್ವೇಷವಿಲ್ಲ
ಹುಚ್ಚು ಆವೇಶಗಳಿಲ್ಲ ನಿರ್ಭಾವುಕ
ವಾಸ್ತವವನ್ನು ಅನುಸರಿಸುತ್ತೇನೆ
ಬದುಕನ್ನು ಇರುವಂತೆಯೇ ಪ್ರೀತಿಸುತ್ತೇನೆ


One thought on “ನಾಗರಾಜ ಜಿ. ಎನ್. ಬಾಡ ‘ಮಾತು’ ಕವಿತೆ

  1. ಒಂದು ಅಪರೂಪದ ನಿದರ್ಶನ ಮಾತು. ಆಡಿದ ಮಾತುಗಳು ಆಪ್ತ. ಆಡದ ಮಾತುಗಳೂ ಮನಸಿಗೆ ಆಪ್ತವೇ. ಒಂದು ಸೊಬಗು ಮಾತಿನದ್ದು. ಮಾತಾಗಿ ಉಳಿಯುವುದು ಮನದಲ್ಲಿ. ಎಲ್ಲವೂ ಸುಪ್ತ ಅನುಭವದ ಪದಗಳಾಗಿ ನೆರಳಾಗುವುದು. ಬದುಕು ಬದುಕುವುದು ಮಾತುಗಳಿಂದಲೇ…….. ಚೆನ್ನಾಗಿದೆ ಕವಿತೆ

    ನಾಗರಾಜ ಬಿ.ನಾಯ್ಕ
    ಹುಬ್ಬಣಗೇರಿ.

Leave a Reply

Back To Top