ಕಾವ್ಯ ಸಂಗಾತಿ
ಶೋಭಾ ಮಲ್ಲಿಕಾರ್ಜುನ್
‘ಅಂತರ್ಮುಖಿ’
[ಮೌನದ ಜೊತೆ ಮಾತನ್ನೂ ನುಂಗಿದ್ದೇನೆ
ಮನದ ಮಸಣದಲಿ ಭಾವನೆಗಳ ಹೂತುಬಿಡಲು
ನಲಿವಿನ ಜೊತೆ ನೋವನ್ನೂ ನುಂಗಿದ್ದೇನೆ
ಮೌನವೇ ಹಬ್ಬಲು ಮೌನವನೇ ತಬ್ಬಲು
ತಂಗಾಳಿಗೆ ಜೊತೆ ಬಿರುಗಾಳಿಯನ್ನೂ ನುಂಗಿದ್ದೇನೆ
ಜೀವನದ ಗಾಳಿಪಟ ಧೂಳೀಪಟವಾಗದಿರಲು
ಬೆಳಕಿನ ಜೊತೆ ಬೆಂಕಿಯನ್ನೂ ನುಂಗಿದ್ದೇನೆ
ಬೇಗುದಿಯ ಬೂದಿ ಬೀದಿ ರಂಪವಾಗದಿರಲು
ಮಮಕಾರಗಳ ಜೊತೆ ಮರ್ಮಘಾತಗಳನ್ನೂ ನುಂಗಿದ್ದೇನೆ
ಕನಸುಗಳ ಗರ್ಭಪಾತವಾಗದಿರಲು
ಒಲವ ನಶೆಯಲಿ ತಾತ್ಸಾರದ ವಿಷವನ್ನೂ ನುಂಗಿದ್ದೇನೆ
ಕಾಪಿಟ್ಟ ಪ್ರೀತಿಯು ಕಲ್ಮಶವಾಗದಿರಲು
ನಿನ್ನ ಅಭಿಮಾನದಲಿ ನನ್ನ ಸ್ವಾಭಿಮಾನವನ್ನೂ ನುಂಗಿದ್ದೇನೆ
ಕಡೆತನಕ ಕಡುಸ್ನೇಹ ಕಳೆದುಕೊಳ್ಳದಿರಲು
ಶೋಭಾ ಮಲ್ಲಿಕಾರ್ಜುನ್
ಚೆನ್ನಾಗಿದೆ ಶೋಭಾ.
ಧನ್ಯವಾದಗಳು ಸರ್
ಮೌನದಲ್ಲಿ ಭಾವಗಳು ಮೂಡಿ ಕವಿತೆ ಆದಾಗ ಚೆನ್ನಾಗಿದೆ ಮೆಡಮ್
ಅರ್ಥಪೂರ್ಣವಾಗಿದೆ
Chenda ide
ಕವಿತೆ
ಬಾಳ ಬಂಡಿ ಬಿರುಗಾಳಿಗೆ ಸಿಲುಕಿದರೂ, ಬೆಂಕಿ ಉಂಡೆಗಳ ಜಡಿ ಮಳೆ ಸುರಿದರು, ಮನವೆಂಬ ಹೊಲದಲ್ಲಿ ಸೂಸುವ ತಂಗಾಳಿಗೆ ಬೆಳಕಿನ ದೀವಟಿಕೆಯನಚ್ಚಿ, ಸಾತ್ವಿಕತೆಯ ಸವಿಯನುಣ್ಣಲು ಮೌನವ ತಬ್ಬಿ ಹಿಡಿದ ಅಂತರ್ಮುಖಿ ಹಲವು ಪೆಟ್ಟಿನಿಂದ ರೂಪುಗೊಂಡ ಸುಂದರ ಶಿಲ್ಪದಂತೆ. ಬಾಳ ಬಂಡಿಯ ಚಕ್ರದಲ್ಲಿ ಹೊರಹೊಮ್ಮುವ ಅಪಸ್ವರಕ್ಕೆ ಹಚ್ಚುವ ಎಣ್ಣೆಯಂತೆ ಸಾಂತ್ವನ ನೀಡುವ ಕವಿತೆ