ಕಾವ್ಯ ಸಂಗಾತಿ
ಲಕ್ಷ್ಮಿ ಮಧು
ಪಿತೃಗಳಿಗೆ
ಮಹಾಲಯ ಅಮಾವಾಸ್ಯೆಯ
ಅತಿಥಿಗಳಾದ ಪಿತೃದೇವತೆಗಳೇ…
ನಿಮ್ಮ ಕೊನೆಯ ಉಸಿರನ್ನು
ನಮಗಿಂತ ಮೊದಲು ಮುಗಿಸಿ
ಹೊರಗಾದವರು ನೀವು..
ಸಾವ ಕಾರಣಕ್ಕೆ ಸಂಬಂಧಗಳು
ಮಾಜಿಯಾದರೇನಂತೆ
ಕರುಳ ಸೆಳೆತದಲ್ಲೇನೂ ರಾಜಿಯಿಲ್ಲ…!!
ಬನ್ನಿ ಪ್ರೀತಿಯ ದಿವಂಗತರೇ
ಕಾಗೆಯಾಗಿಯೋ
ಮಿಡತೆಯಾಗಿಯೋ ಗೋವಾಗಿಯೋ…
ನಾವು ನಮಸ್ಕರಿಸುತ್ತೇವೆ
ಕೊರಗಿನ ಹೂವುಗಳನ್ನು
ಕೈತುಂಬ ಹಿಡಿದು..!!
ಎಳ್ಳು ದರ್ಭೆ ತರ್ಪಣ ಪಿಂಡ
ಬಾಡು ಬೀಡಿ ನೊರೆಹೆಂಡ
ಮಂತ್ರಮಾರ್ಗವೋ ಮನದ ಮೊರೆಯೋ …
ನಿಮಗೆ ಶ್ರದ್ಧೆಯ ಅನ್ನನೀರು
ನೆನಪಿನ ನೆರಳನ್ನು
ನಾವು ತಪ್ಪಿಸುವುದಿಲ್ಲ…!!
ಬೆಂಕಿ ಹಳ್ಳ ಹದ್ದುಗಳಲ್ಲಿ
ಅರಗಿಹೋಗಿರಲಿ ನಿಮ್ಮ ದೇಹ
ಮಮತೆಗೆ ಮೈಯೇನೂ ಇಲ್ಲ…
ಹಾರಿ ಬನ್ನಿರಿ ನೀವು
ಕಾಂತಕೂ ಕಬ್ಬಿಣಕೂ ಕಾಗದದ ಚೂರೊಂದು ಅಡ್ಡಿಯಾಗುವುದಿಲ್ಲ..!!
ಬನ್ನಿ ನಿಗೂಢ ಗಲ್ಲಿಗಳಲ್ಲಿ
ಋಣಸಂದಾಯದ ಕಾರಣವಿಟ್ಟು
ಬನ್ನಿ ಕತ್ತಲೆಯಲ್ಲಿ ಕಿರುದೀಪ ಹೊತ್ತು..
ಬನ್ನಿ ಭೇಟಿಯಾಗಲು ನನ್ನವರೇ
ಕಣ್ಣೀರು ಪಶ್ಚಾತ್ತಾಪ ನಿಟ್ಟುಸಿರುಗಳ
ನೈವೇದ್ಯವನ್ನು ನಾವು ಸಲ್ಲಿಸುತ್ತೇವೆ..!!
ಪ್ರೀತಿ ಕ್ಷಮೆಗಳುಳ್ಳ ಹಿರಿಯರು ನೀವು
ನಮ್ಮ ಹಸಿದ ನೆತ್ತಿಗೆ ಹರಕೆಗಳ
ಪ್ರಸಾದವನ್ನು ಕರುಣಿಸುತ್ತೀರಿ..!!
ಇಲ್ಲಿ ಮಮತೆಗಳನ್ನು ಬೆಸೆದವರು ತಾವು
ಮತ್ತೆ ಅಲ್ಲಿಗೆ ಹೋಗಬೇಡಿ
ಎಂದೆಲ್ಲ ನಾವು ಗೋಗರೆಯುತ್ತೇವೆ..
ಹೊತ್ತು ಮೂಡುವ ಹೊತ್ತಿಗೆಲ್ಲ
ನೀವು ಕಾಲು ಝಾಡಿಸಿಕೊಂಡೆದ್ದು
ಕಣ್ಣೊರೆಸಿಕೊಂಡು ಕಡೆದುಬಿಡುತ್ತೀರಿ..!!
ಬೆಳಕು ಹರಿದರೆ ಅಮ್ಮನ ಹಬ್ಬವಿದೆ
ಅದನ್ನಷ್ಟು ನಡೆಸಿ
ನಾವೂ ಹೊರಡುವುದು ಇದ್ದೇ ಇದೆ..
ಸಮಾನಾಂತರದ ಬೇಲಿಗಳಲ್ಲಿ
ಹಬ್ಬಿದ ಕರುಳಬಳ್ಳಿಗಳು
ಕಾಲಕಾಲಕ್ಕೆ ಹೂವೊಡೆಯುತ್ತದೆ..!!
ಪಕ್ಷಗಳುರುಳಿ ಮಾಸಗಳೋಡಿ
ಮತ್ತೆ ಬರುತ್ತದೆ ಮಹಾಲಯ
ಮತ್ತೆ ಭೇಟಿಯಾಗುತ್ತೇವೆ ನಾವು..
ಮತ್ತೆ ಒಳ ಹೊರಗುಗಳ ಸಂಧ್ಯೆ
ಮತ್ತೆ ನೆರಳುಗಳ ಮಿಲನ
ಮತ್ತೆ ಕಣ್ಣೀರ ಶುಲ್ಕ ಸಲ್ಲಿಕೆ..!!
ಮತ್ತೆ..ಮತ್ತೆ.. ಮತ್ತೆ.. ಮತ್ತೆ..
ಪುನರಪಿ…..
ಲಕ್ಷ್ಮಿ ಮಧು