ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಔದಾರ್ಯದ ಪರಿಣಾಮ
ಮುಂಬೈಯ ಅತ್ಯಾಧುನಿಕ ಹೋಟೆಲ್ ಒಂದರಲ್ಲಿ ಹೊಟ್ಟೆ ತುಂಬಾ ಊಟ ಮಾಡಿದ ವ್ಯಕ್ತಿ ತನಗೆ ಬೇಕಾದ್ದನ್ನೆಲ್ಲ ತಿಂದು ವೇಟರ್ ತಂದು ಕೊಟ್ಟ ಬಿಲ್ ನ ಚೀಟಿಯನ್ನು ಹಿಡಿದು ಕೌಂಟರ್ನಲ್ಲಿ ಕುಳಿತಿದ್ದ ಮ್ಯಾನೇಜರ್ ಬಳಿ ಬಂದು ತನ್ನಲ್ಲಿ ಹಣವಿಲ್ಲ ಎಂದು ಅತ್ಯಂಥ ಪ್ರಾಮಾಣಿಕವಾಗಿ ಹೇಳಿದನು. ಕಳೆದ ಎರಡು ದಿನಗಳಿಂದ ಹೊಟ್ಟೆಗೆ ಒಂದು ತುತ್ತು, ಆಹಾರವಿಲ್ಲದೆ ಹಸಿವಿನಿಂದ ಒದ್ದಾಡುತ್ತಿದ್ದ ತಾನು ಗತ್ಯಂತರವಿಲ್ಲದೆ ಈ ಕ್ರಿಯೆಗೆ ಇಳಿಯಬೇಕಾಯಿತು ಎಂದು ಆತ ಹೇಳಿದ.
ತನಗೆ ಕೆಲಸ ದೊರೆಯುತ್ತದೆ ಬರುವ ಸಂಬಳದ ಹಣದಲ್ಲಿ ಖಂಡಿತವಾಗಿಯೂ ನಿಮ್ಮ ಹೋಟೆಲ್ನ ಬಿಲ್ ಚುಕ್ತಾ ಮಾಡುವೆ ಎಂದು ಆ ವ್ಯಕ್ತಿ ಹೇಳಿದ್ದನ್ನು ಮ್ಯಾನೇಜರ್ ಪ್ರಶಾಂತವಾದ ಮನಸ್ಥಿತಿಯಿಂದ ಕೇಳಿ
ಆಯ್ತು ನಿಮಗೆ ಒಳ್ಳೆಯದಾಗಲಿ ಎಂದು ಹಾರೈಸಿ ಕಳುಹಿಸಿದ. ಅಲ್ಲಿಯೇ ನಿಂತು ಇದೆಲ್ಲವನ್ನು ನೋಡುತ್ತಿದ್ದ ವೇಟರ್ ತುಸು ಸೋಜಿಗದಿಂದ ಮ್ಯಾನೇಜರನನ್ನು ಆ ವ್ಯಕ್ತಿಗೆ ಹಣ ಕೊಡದೆ ಹೋಗಲು ಏಕೆ ಬಿಟ್ಟಿರಿ? ಎಂದು ಪ್ರಶ್ನಿಸಿದ. ಮ್ಯಾನೇಜರ್ ಬೇರೇನೂ ಹೇಳದೆ “ಹೋಗು, ನಿನ್ನ ಕೆಲಸ ನೀ ಮಾಡು” ಎಂದು ಹೇಳಿ ಕಳುಹಿಸಿದ.
ಕೆಲ ತಿಂಗಳುಗಳ ನಂತರ ಅದೇ ವ್ಯಕ್ತಿ ಮರಳಿ ರೆಸ್ಟೋರೆಂಟ್ ಗೆ ಬಂದು ತಾನು ಬಾಕಿ ಉಳಿಸಿದ ಬಿಲ್ ನ ಹಣವನ್ನು ಚುಕ್ತಾ ಮಾಡಿದ. ಜೊತೆಗೆ ಮ್ಯಾನೇಜರ್ ಗೆ ಧನ್ಯವಾದಗಳು ಹೇಳುತ್ತಾ ತನಗೆ ನಟನಿಗೆ ಆಫರ್ ಬಂದಿದ್ದು ಬದುಕಿನಲ್ಲಿ ಒಳ್ಳೆಯ ನಿರೀಕ್ಷೆ ಉಂಟಾಗಿದೆ ಎಂದು ಹೇಳಿದ.ಮ್ಯಾನೇಜರ್ ಸಂತೋಷದಿಂದ ಆತನಿಗೆ ಒಂದು ಕಪ್ ಚಹಾ ಕುಡಿಸಿ ಕಳುಹಿಸಿದ. ಅವರಿಬ್ಬರ ನಡುವೆ ಒಂದೊಳ್ಳೆಯ ಸ್ನೇಹ ಆರಂಭವಾಯಿತು.
ಮುಂದಿನ ಕೆಲ ತಿಂಗಳುಗಳಲ್ಲಿಯೇ ಆತ ಓರ್ವ ಜನಪ್ರಿಯ ನಟನಾದ. ಹಲವಾರು ಚಿತ್ರಗಳಲ್ಲಿ ನಟಿಸಿ ಪ್ರಸಿದ್ಧನಾದ ಆತನಿಗೆ ಹಣದ ಹೊಳೆಯೇ ಹರಿದು ಬಂತು. ಬಹುದೊಡ್ಡ ಬಂಗಲೆ, ಕಾರು, ಒಂದೊಳ್ಳೆಯ ಜೀವನ ಶೈಲಿ ಹೊಂದಿದ ಆತನ ಬದುಕೇ ಬದಲಾಯಿತು.
ಐಷಾರಾಮಿ ಕಾರಿನಲ್ಲಿ ಓಡಾಡುತ್ತಿದ್ದರೂ ಆತ ಆ ರೆಸ್ಟೋರೆಂಟ್ ನ ದಾರಿಯಲ್ಲಿ ಓಡಾಡುವ ಸಮಯದಲ್ಲಿ ಖಂಡಿತವಾಗಿಯೂ ರೆಸ್ಟೋರೆಂಟ್ ಗೆ ಭೇಟಿ ಕೊಟ್ಟು ಚಹಾ ಕುಡಿದು ಹೋಗುತ್ತಿದ್ದ.
ನಂಬಿಕೆ ಎನ್ನುವುದು ಅದ್ಭುತಗಳನ್ನು ಸೃಷ್ಟಿಸುತ್ತದೆ. ನಂಬಿಕೆಯ ಬಲದಿಂದಲೇ ಜಗತ್ತು ನಿಂತಿರುವುದು. ಅಂದು ಹೋಟೆಲ್ ಮಾಲೀಕನ ಪ್ರಬುದ್ಧ ವರ್ತನೆಯಿಂದಾಗಿ ಚಲನಚಿತ್ರರಂಗದಲ್ಲಿ ಓರ್ವ ಅದ್ಭುತ ನಟ ಕಾಲೂರಲು ಕಾರಣವಾಯಿತು.
ಅಂತಹ ನಂಬಿಕೆಯನ್ನು ಉಳಿಸಿಕೊಂಡ ವ್ಯಕ್ತಿಯೇ ಖ್ಯಾತ ಹಿಂದಿ ಚಲನಚಿತ್ರ ನಟ ಓಂ ಪ್ರಕಾಶ್.
ನಂಬಿಕೆ ಎರಡು ಹೃದಯಗಳ ನಡುವಿನ ಸೇತುವೆಯಾಗಿ, ಪ್ರೀತಿಯ ಬಂಧವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು, ನಮ್ಮನ್ನು ನಂಬಿದವರನ್ನು ನಾವೆಂದೂ ಕೈ ಬಿಡಬಾರದು ಎಂಬುದನ್ನು ಮೇಲಿನ ಘಟನೆಯಿಂದ ನಾವು ತಿಳಿಯಬಹುದು. ಏನಂತೀರಾ ಸ್ನೇಹಿತರೆ?
ವೀಣಾ ಹೇಮಂತ್ ಗೌಡ ಪಾಟೀಲ್