ಕಾವ್ಯ ಸಂಗಾತಿ
ಲೀಲಾಕುಮಾರಿ ತೊಡಿಕಾನ
ಹೃದಯದ ಹಣತೆ
ಈ ಕತ್ತಲು ಬೆಳಕಿನ ಗುದ್ದಾಟ
ಇಂದು ನಿನ್ನೆಯದಲ್ಲ ಹಣತೆ!
ನೀ ಬಂದಾಗಷ್ಟೇ… ಶಮನ..
ಝಗಮಗಿಸುವ ಬೆಳಕಲ್ಲಿ
ನಿಂತವರ ಹೃದಯದೊಳಗೇ..
ಅಡಗಿದೆ ನೋಡು!
ಕತ್ತಲ ಗೆಲ್ಲಲೇಬೇಕೆಂಬ
ಜಿದ್ದು ನಿನಗಿದ್ದಷ್ಟೇ…
ನಿನ್ನ ಬೆಳಗುವ ಕೈಗಳಿಗೂ..ಇದ್ದಿದ್ದರೆ
ಕತ್ತಲೊಂದಿಗಿನ ನಿನ್ನ
ಹೋರಾಟ ಅದೆಷ್ಟು..ಸುಲಭ!
ಹೋರಾಡುತ್ತಾ ಹೋರಾಡುತ್ತಾ
ತೈಲವಾರುತ್ತಾ ನೀ ಕ್ಷೀಣಿಸಿದಾಗಲೇ
ಗಾಳಿಯೂ ಕತ್ತಲ ಜೊತೆ ಸೇರಿ
ಮಾಡಿದ ಮಸಲತ್ತಿಗೆ
ನೀ ಮಣಿಯುತ್ತಲೇ ಇರಲಿಲ್ಲ…
ಹೊರಗೆ ಬೆಳಕಿನಲ್ಲಿ ಹೊಳೆಯುತ್ತಾ
ಕತ್ತಲ ಗೆದ್ದೆನೆಂದು ಬೀಗುವವರ
ಒಳಗೆ ಯಾಕಿಷ್ಟು ಕತ್ತಲೆ??
ಕೇಳಿ ಬಿಡು ಹಣತೆ….
ಬೆಳಕೆ ಕಾಣದ ಹೃದಯಗಳು
ಎಡವಿ ಉಳುಕುವ ಮುನ್ನ
ತೂರಿ ಬಿಡು ಹೃದಯದೂರಿನ ಒಳಗೆ
ಒಳಗಿನ ಕತ್ತಲು ಮರೆಯಾದರಷ್ಟೇ..
ಪ್ರತಿಫಲಿಸಬಹುದೇನೋ…
ಹೊರ ಜಗತ್ತು!!
ಲೀಲಾಕುಮಾರಿ ತೊಡಿಕಾನ