ಹಮೀದಾಬೇಗಂ ದೇಸಾಯಿ ಅವರ ಗಜಲ್

ನೀರಸವಾಗಿದೆ ಬದುಕು ರಾಗವಿಲ್ಲದ ಗಾನದಂತೆ ನನ್ನ ಗುಲಾಬಿ
ಮಾಸಿದಂತಾಗಿದೆ ಮನಸು ಬಣ್ಣಹೋದ ಚಿತ್ರದಂತೆ ನನ್ನ ಗುಲಾಬಿ

ಉಲ್ಲಾಸವೆಲ್ಲ ಮಂಜಿನಂತೆ ಕರಗಿ ಹೋಗುತಿದೆ ಗೊತ್ತೇ
ಭಾರವಾಗಿದೆ ಹೃದಯ ಚೇತನವೆಲ್ಲ ಉಡುಗಿದಂತೆ ನನ್ನ ಗುಲಾಬಿ

ಅಡಗಿ ಕುಳಿತಿವೆ ಬಯಕೆಗಳು ಎದೆಗೂಡಿನಲಿ ಮುನಿದು
ಕನಸುಗಳು ಮುದುರಿಕೊಂಡಿವೆ ರೆಕ್ಕೆಗಳು ಮುರಿದಂತೆ ನನ್ನ ಗುಲಾಬಿ

ಒಲವಿನೊರತೆ ಬತ್ತುತಿದೆ ನನ್ನಿನಿಯನ ದಾರಿ ಕಾಯುತ
ತಂಗಾಳಿಯೂ ಬಿಸಿಯಾಗಿದೆ ಕೆಂಡದಲಿ ಕಾಯಿಸಿದಂತೆ ನನ್ನ ಗುಲಾಬಿ

ಪಾರಿಜಾತದ ಹೂಗಳು ಅಂಗಳದಲಿ ಹರಡಿವೆ ತಾರೆಗಳಂತೆ
ಬೇಗಂಳ ಕಂಬನಿ ಸುರಿದಿವೆ ಮುತ್ತುಗಳು ಉದುರಿದಂತೆ ನನ್ನ ಗುಲಾಬಿ


6 thoughts on “ಹಮೀದಾಬೇಗಂ ದೇಸಾಯಿ ಅವರ ಗಜಲ್

  1. ಪ್ರೀತಿ ಮತ್ತು ನಿರೀಕ್ಷೆಯ ಭಂಗವನ್ನು ಕರಗಿದ ಮಂಜಿನಂತೆ ಚಿತ್ರಿಸಿದಿರಿ, ಅತಿ ಸುಂದರ.❤️❤️

  2. ಮಡುಗಟ್ಟಿದ ನೋವು ವ್ಯಕ್ತವಾದ ರೀತಿ ಮಾರ್ಮಿಕವಾಗಿ ಮೂಡಿಬಂದಿದೆ.

Leave a Reply

Back To Top