ಕಾವ್ಯ ಸಂಗಾತಿ
ಅಂಬಾದಾಸ ವಡೆ
ಬಯಲು
ಹರಿದ ನದಿಯಾಗಿತ್ತು
ಇಬ್ಬರ ಅಕ್ಕರೆಯ ಹೊತ್ತುಗಳು.
ಚಂದ್ರನ ಬೆಳಕಲಿ ಪಯಣ
ಅನಂತ ಸ್ಪರ್ಶ ಹೊಸ ಜೀವಕೆ
ಸಾಕ್ಷಿಯಾಗಿದ್ದವು ತಾರೆಗಳು !
ಬಾಚಿದ ಬಾಹುಗಳಲಿ
ಬಿಸಿಉಸಿರಿನ ಬೆಸುಗೆ
ಕೆನ್ನೆತುಂಬ ಹರಿಯುವ
ಸಾಲು ಪ್ರೀತಿಯ ಕತೆಗಳು.
ನಿಬಿಡ ಕತ್ತಲೆಯಲೂ
ಬೆಳಕಿನ ಬಿಂಬಗಳು
ತಣ್ಣಗೆ ಹರಿಯುವ ನೀರಂತೆ
ಕಡಲ ಆರ್ಭಟದ ಅಲೆಗಳು.
ಕ್ರಮಿಸುವ ದಾರಿಯ ಬಿಂದುವಿಗೆ
ನಗು ಉಕ್ಕಿಸುವ ಸುಳಿವು !
ಮೈ ಬೆಸೆದು ಹೋದ ಮರದ ನೆರಳಲಿ
ಕನಸು ಹೊತ್ತ ಮರಳಿನ ಮಜಲು
ದಡದ ಹಾದಿಗೆ ಸಂತಸದ ಹೆಜ್ಜೆಗಳು
ಹರಿದ ತಾಪಕೆ ಬಿಟ್ಟ ಬಾಣದಲೂ
ತಬ್ಬಿಕೊಂಡ ಮಳೆಯ ಘಮಲು !
ಈಗ ಬೀಸುವ ಬಯಕೆಯ ಗಾಳಿಯಲಿ
ಏರುತಿದೆ ಬಿಸಿಲು !
ತೇವವಿಲ್ಲದ ಕಣ್ಣುಗಳು,
ಮಾತುಗಳೂ ಕೂಡ !
ಅಂತರದ ಚುಂಗು ಹಿಗ್ಗಿಸುತ
ಕಟ್ಟಿದೆ ತಬ್ಬಿದ ಕೈಗಳಿಗೆ
ನಿಶ್ಯಬ್ಧತೆಯ ಗೂಡು !
ನಗೆಚೆಲ್ಲಿ ಹೋದ ಕಾಲದ
ತಿರುವಿನಲಿ ಮೌನದ ಹೆಣಿಗೆ !
ಬಿಚ್ಚದ ನೋಟ,
ದ್ರವಿಸದ ಹೃದಯ ಹಿಮಪಾತದಡಿ.
ಬರೆದ ಬಾಳ ನಕ್ಷೆ
ಮುಸುಕಿನ ಗೊಂಡಾರಣ್ಯ !
ಬಿಟ್ಟ ಮಳೆಗೆ ನಡುಗುವ ಅಂಗಳದ
ಅಳಸಿ ಹೋದ ರಂಗೋಲಿ !
ಮಾತೆಂದರೆ ಈಗ
ಇಬ್ಬರಿಗೂ ಭೀಭತ್ಸ ಶೂನ್ಯ,
ಮೌನ ಕೂಡ ನಿರ್ಜೀವ ತಾಣ !
ಅಂಬಾದಾಸ ವಡೆ