ಗಂಗಾ ಚಕ್ರಸಾಲಿ ಅವರ ಕವಿತೆ-‘ಸಿಕ್ಕುಗಳ ಸುಳಿಯಲಿ’

ಮನಗಳೆಂಬ ಈ ಕರಿಮುಗಿಲಲಿ
ಕಾರ್ಮೋಡ ಕಟ್ಟಿರುವಾಗ
ನಮ್ಮ ಭೇಟಿಯೇ ತಪ್ಪಾಗಿತ್ತಾ
ಎನ್ನಿಸುತ್ತಿದೆ ಈಗೀಗ|

ನಗುಮಾತಿನ ಹೂಗಳನು
ಪ್ರೀತಿ ದಾರದಲಿ ಜೋಡಿಸಿದೆವು
ಒಮ್ಮೆಲೇ ಗಂಟು ಬಿದ್ದಿದ್ದು
ಗೊತ್ತಾಗಲೇ ಇಲ್ಲ…
ಅದನ್ನು ಬಿಡಿಸದೇ,ಹರಿಯದೇ
ಮೌನದಾರಿಯೊಳಗೆ
ಸುಮ್ಮನೆ ನಡೆಯುತ್ತಿರುವೆವು ಈಗೀಗ|

ತಪ್ಪು ನಿನ್ನದಾ ನನ್ನದಾ
ಅಹಮ್ಮಿನ ಗೋಡೆ
ಅಡ್ಡ ನಿಂತಿರುವಾಗ
ಅರಿತುಕೊಳ್ಳುವ ಹಂಬಲವು
ಬತ್ತುತ್ತಿದೆ ಈಗೀಗ….

ಹುಡುಕಿದಷ್ಟು ಸಿಕ್ಕುಗಳು
ಕೇಳಿದಷ್ಟು ಪ್ರಶ್ನೆಗಳೇ
ಉತ್ತರಗಳ ಗೊಡವೆಯೇ
ಬೇಕಿಲ್ಲದಿರುವಾಗ..
ಮಾತುಗಳು ವ್ಯರ್ಥವೆನಿಸುತ್ತಿವೆ ಈಗೀಗ…


Leave a Reply

Back To Top