ಚೆಲ್ಲಿ ಹೋಯಿತು ಉಸಿರು
( ಪರಿಸರ ದಿನದಂದು ಈ ಕವಿತೆ ಬರೆಯಬೇಕಾದ್ದಕ್ಕೆ ವಿಷಾದಿಸುತ್ತ)
ವಿಜಯಶ್ರೀ ಹಾಲಾಡಿ
ಚೆಲ್ಲಿಹೋಯಿತು ಉಸಿರು…
( ಪರಿಸರ ದಿನದಂದು ಈ ಕವಿತೆ ಬರೆಯಬೇಕಾದ್ದಕ್ಕೆ ವಿಷಾದಿಸುತ್ತ)
ಗಾಳಿಗೆ ಗಂಧ ತುಂಬುತ್ತಿದ್ದ
ಬಾಗಾಳು ಮರವನ್ನು
ಈ ಬೆಳಗು ಕಡಿಯಲಾಗಿದೆ
ಮರದ ಮಾಂಸ ರಕ್ತ ಚರ್ಮ
ಚೆಲ್ಲಾಡಿದ ಬೀದಿಯೊಳಗೆ
ಇದೀಗ ತಾನೇ ನಡೆದುಬಂದೆ
ನೆಲದಲ್ಲಿ ಜಜ್ಜಿಹೋದ ಹೂ
ಮೊಗ್ಗು ಎಲೆಗಳ ಕಂಬನಿ
ಕುಡಿಯುತ್ತಾ…
ಹಕ್ಕಿ ಕೊರಳಿಗೆ ಕಷಾಯ
ಕುಡಿಸಿದ ಸಂಗಾತಿ ಮರ
ಮಣ್ಣಿನಾಳದ ಕಸುವುಗಳ
ನಕ್ಷತ್ರಗಳಿಗೆ ಅಂಟಿಸಿದ
ಅವಧೂತ ಮರ
ಜೀವಜಂತುಗಳಿಗೆ ಜೀವಜಲ
ಮೊಗೆದ ತಾಯಿಮರ
ಬದುಕಿತ್ತು ಇಲ್ಲೇ ಕಣ್ಣೆದುರಲ್ಲೇ
ಮಾತು ಮೀರಿದ
ಬುದ್ಧಕಾರುಣ್ಯದಂತೆ
ಮಮತೆ ತೋಳುಗಳಂತೆ…
ಚೆಲ್ಲಿಹೋಯಿತು ಉಸಿರು
ಸಾವು ಹೆಪ್ಪುಗಟ್ಟಿದಂತೆ!
******
ಬಾಗಾಳು ಮರ– ಬಕುಲದ ಮರ. ಪಶ್ಚಿಮಘಟ್ಟದ ಸಸ್ಯ. ನವಿರು ಪರಿಮಳದ ಹೂಗಳನ್ನು ಬಿಡುತ್ತದೆ. ಕಾಡಿನ ನಾಶದಿಂದಾಗಿ ಈ ಮರದ ಸಂಖ್ಯೆ ಕ್ಷೀಣಿಸಿದೆ.
ಸು.ರಂ.ಎಕ್ಕುಂಡಿಯವರ ಒಂದು ಕವನಸಂಕಲನದ ಹೆಸರು: ಬಕುಲದ ಹೂಗಳು.
**
ವಿಜಯಶ್ರೀ ಹಾಲಾಡಿ
*
Very nice madam