ಕಾವ್ಯ ಸಂಗಾತಿ
ರಮ್ಯಾ ಹೆಚ್ ಆರ್
‘ಪ್ರೀತಿಯ ಮಡಿಲೊಳಗೆ’
ಕಾಯುತಿರುವೆ , ಮಿಂದೇಳಲು ಬಿಡು
ನನ್ನನು ನಿನ್ನೊಲವ ಜಿಡಿ ಮಳೆಯಲಿ
ಶೀತವಾಗುವವರೆಗೆ.
ಕೊಂದುಬಿಡು ನಿನ್ನೊಡನೆನಿರಬೇಕೆಂಬ
ನನ್ನೆಲ್ಲಾ ಆಸೆಗಳ,ಜೊತೆಯಿದ್ದು
ನನಗೆ ಸಾಕೆನಿಸುವಷ್ಟು ಗಳಿಗೆ
ತುಂಬಿಕೊಳ್ಳುವೆ ನಿನ್ನ ಸಾಂಗತ್ಯದ
ಪ್ರತಿ ಕ್ಷಣವನ್ನೂ ಮನದ ಚಿಪ್ಪಿನಲ್ಲಿ ಮುತ್ತ ಆಗುವವರೆಗೆ .
ಇನ್ನೊಂದಿದೆ ಹೆಬ್ಬಯಕೆ ಸುರಿವ ಮಳೆಯಲ್ಲಿ ಕೊರೆವ ಚಳಿಯಲ್ಲಿ ಹೀರಬೇಕಿದೆ
ನೀ ಮಾಡಿದ ಕಾಫಿ, ಬಂಧಿಯಾಗಿ
ನಿನ್ನ ಬಾಹುಗಳೊಳಗೆ.
ಮಲಗಲು ಬಿಡು ನಿನ್ನೆದೆಯ ಮೈದಾನದಲ್ಲಿ
ಸ್ತಬ್ಧವಾಗುವಂತೆ ಬದುಕ ಈ ಎಲ್ಲಾ
ಜಂಜಾಟಗಳು .ಇರದಿರಲಿ ಚೂರು
ಅರಿವೇ ಯಷ್ಟು ಅಂತರವೂ ನಮ್ಮೊಳಗೆ
ಸಹಕರಿಸಿ ಬಿಡು, ಮಾಡಿ ವ್ಯವಸಾಯ ನನ್ನ ಗರ್ಭವೆಂಬ ಫಲವತ್ತಾದ ಭೂಮಿ ಯೊಳಗೆ ,
ಮುಂದಿನ ನವ ವಸಂತದಲ್ಲಿ ಚಿಗುರೊಡೆದು ರೂಪ ತಳೆಯಲಿ ನಮ್ಮ ಕರುಳ ಬಳ್ಳಿ ನಿನ್ನ ಹಾಗೆ
ಪ್ರೀತಿಸಿ ಬಿಡು ಇನ್ನಷ್ಟು, ಕರಗಿ ಹೋಗಲಿ ನನ್ನೆಲ್ಲಾ ದುಃಖ ದುಮ್ಮಾನಗಳು ಕೇವಲ ನಿನ್ನದೊಂದು ನೋಟ ದಾಟಿಗೆ.
ಕಳುಹಿಸಿ ಕೊಡು ನನ್ನನ್ನು ಚಿರಶಾಂತಿ ಕಡೆಗೆ ಕೊನೆಯಾಗಲಿ ನನ್ನೆಲ್ಲಾ ಉಚ್ಛ್ವಾಸ ನಿಶ್ವಾಸಗಳ ನಿನ್ನ ಪ್ರೀತಿಯ ಮಡಿಲೊಳಗೆ.
ರಮ್ಯಾ ಹೆಚ್.ಆರ್.
Nice ramya
Thank you