ಕಾವ್ಯಸಂಗಾತಿ
ಹಮೀದಾ ಬೇಗಂ ದೇಸಾಯಿ
ಗಜಲ್
ಕಾನನದ ಶಿಲೆಯಂತೆ ಮನಸು ಮೌನವಾಗಿದೆ ಏನು ಮಾಡಲಿ
ಹೆಣೆದ ಕನಸು ಹರಿದ ಜೇಡನ ಬಲೆಯಾಗಿದೆ ಏನು ಮಾಡಲಿ
ಎದೆಯಲಿ ಬಿತ್ತಿದ ಭಾವಗಳು ಮುಲುಗುತಿವೆ ಉಸಿರುಗಟ್ಟಿ ಗೊತ್ತೇ
ನೆನಪುಗಳ ರಂಗೆಲ್ಲ ಚದುರಿ ಮಸುಕಾಗಿದೆ ಏನು ಮಾಡಲಿ
ಅರಳಿದ ಪಾರಿಜಾತಗಳ ಆಯ್ದು ತಂದಿದ್ದೆ ಜತನದಿಂದ ನಿನಗಾಗಿ
ಕಂಬನಿಯಿಂದ ತೊಯ್ದ ಕದಪು ಕರೆಯಾಗಿದೆ ಏನು ಮಾಡಲಿ
ಹೆಪ್ಪಿಟ್ಟ ಕಾರ್ಮೋಡ ಅದೇಕೋ ಕರಗಿ ಸುರಿಯಲೇ ಇಲ್ಲ
ಕಪ್ಪಿಟ್ಟ ವದನದಲಿ ನಗುವೇಕೋ ಮೂಡದಾಗಿದೆ ಏನು ಮಾಡಲಿ
ಆಸೆಗಳೆಲ್ಲ ನೊಂದು ಮುದುರಿ ಗೂಡು ಸೇರಿವೆ ನೋಡು
ಬೇಗಂಳ ಬೆಂದ ಹೃದಯಕೆ ಆಸರೆಯು ಕಾಣದಾಗಿದೆ ಏನು ಮಾಡಲಿ
ಹಮೀದಾ ಬೇಗಂ ದೇಸಾಯಿ
ನೋವುಗಳನ್ನು ಹೊರಹಾಕಿ ಭಾವುಕವಾಗಿ ಹೆಣೆದ ರೀತಿ ಮಾರ್ಮಿಕವಾಗಿ ಮೂಡಿಬಂದಿದೆ.
ಸ್ಪಂದನೆಗೆ ಧನ್ಯವಾದಗಳು.