ಕಾವ್ಯ ಸಂಗಾತಿ
ಅಶ್ಫಾಕ್ ಪೀರಜಾದೆ
ಮರೆಯುವುದೆಂದರೆ….
ಮರೆಯುವುದು ಮನುಷ್ಯನ ಹಳೆ ಚಾಳಿ
ಈಗಷ್ಟೇ ಹೇಳಿದ್ದು, ಕೇಳಿದ್ದು ಮಾತುಕೊಟ್ಟಿದ್ದು
ವಚನ ನೀಡಿದ್ದು
ಹಿಂದಿನದು ಮುಂದಿನದು ಮರೆಯುತ್ತಲೇ ಇರುತ್ತಾನೆ
ಒಮ್ಮೊಮ್ಮೆ ಬೇಡವೆಂದಕೊಂಡರೂ,
ಮತ್ತೊಮ್ಮೆ ಬೇಕು ಬೇಕಂತಲೇ ಜಾಣ ಮರೆವು
ಹಾಗೋ ಹೀಗೋ ಒಮ್ಮೊಮ್ಮೆ ಮರೆತು ಬಿಡುವುದಂತೂ ನಿಶ್ಚಿತ..
ಆದರೆ ಮರೆವು ಅನ್ನುವುದು
ಮರೆತೆನೆಂದರೂ ಮರೆಯಲಾರದಂಥದ್ದು
ಮರೆಯುವುದೆಂದರೆ
ಒಂದರ್ಥದಲ್ಲಿ ನೆನಪಿಸಿಕೊಳ್ಳುವುದೇ ಇರಬಹುದು
ನಾವು ಪದೆ ಪದೆ ಮರೆಯಲೆತ್ನಿಸುವ
ಘಟನೆಗಳು, ಸ್ಥಳಗಳು, ವ್ಯಕ್ತಿಗಳು, ಮಾತುಗಳು…
ಕನಸಿನಲ್ಲೋ ಮನಸಿನಲ್ಲೋ ಬಂದು ಕಾಡುವದೆಂದರೆ
ಮರೆಯಲಾಗದ್ದು ಮರೆಯುವ ವ್ಯರ್ಥ ಪ್ರಯತ್ನ
ಸಂತೆಗೋ.. ಅಂಗಡಿಗೋ..
ಏನೋ ತರಲು ಹೋಗಿ ಇನ್ನೇನೋ ತರುವುದು
ಕೆಲವೊಮ್ಮೆ ಪತ್ನಿ ಹೇಳಿದನ್ನು ಮರೆತೇ ಬರುವುದು
ಅವಳ ಕೆಂಗಣ್ಣಿಗೆ ಗುರಿಯಾಗಿ
ಜಗತ್ತಿನ ಎಲ್ಲ ವಿಷಯ ನೆನಪಿರುತ್ತದೆ;
ನಾವ್ ಹೇಳಿದ್ದು ಮಾತ್ರಾ ನೆನಪಿನಲ್ಲಿಲ್ಲ
ಎನ್ನುವ ಕಹಿಮಾತು ನುಂಗಿಕೊಂಡರೂ ಹೌದು
ರಾಜಕೀಯ, ಸಾಹಿತ್ಯ, ಸಾಮಾಜಿಕ ವಿದ್ಯಮಾನಗಳೆಲ್ಲ
ಎಂದೋ ಆಡಿದ ಗವಾಸ್ಕರ್, ಸಚೀನ್ ಶತಕಗಳು
ಅಮೀತಾಬ್, ರಾಜ ಕುಮಾರರ ಡೈಲಾಗಗಳು ಇತ್ಯಾದಿ
ನೆನಪಿನಲ್ಲಿ ಉಳಿದು ಅಪ್ಪ ಹೇಳಿದ ಔಷಧಿ,
ಹೆಂಡ್ತಿ ಹೇಳಿದ ಹಾಲು ತರಕಾರಿ,
ಮಕ್ಕಳು ಹೇಳಿದ ಪೆನ್ನು, ಪೆನ್ಸಿಲ್ ಗಳಂಥ
ಸಣ್ಣ ಸಣ್ಣ ಸಂಗತಿಗಳು ಬೇಡ ಬೇಡವೆಂದರೂ
ಮಿದುಳಿನಿಂದ ಡಿಲೀಟ್ ಆಗುವುದು
ಸ್ಮರಣಶಕ್ತಿಯ ಅದ್ಭುತವಲ್ಲದೆ ಇನ್ನೇನು !