ಸುಮಶ್ರೀನಿವಾಸ್ ಅವರ ಕವಿತೆ-ಬೆಳದಿಂಗಳ ನಗೆ

ಹೀಗೇ ಹುಣ್ಣಿಮೆಯ
ರಾತ್ರಿಯಲಿ
ತಿಳಿ ಕೊಳದ
ತಟದಲಿ ಕುಳಿತು
ಬಾಗಿದೆ

ನಿರ್ಮಲ ನಗೆಬೀರಿದ
ಚಂದ್ರಮನ ದಿಟ್ಟಿಸಿ
ಒಲವಾದ ನೆನಪಿಗೆ
ಅರಿವಿರದೆ
ಜಾರಿದೆ

ಅದೋ ನನಗಾಗೆ
ನನ್ನತ್ತ ಅಡಿಯಿಟ್ಟಂತೆ
ಸನಿಹವಾದ
ಇರುಳ ಕಳೆವ ಬೆಳಕಿಗೆ
ಮನಸೋತೆ

ನೀರವ ಮೌನ
ಕಣ್ಗಳಷ್ಟೇ ಮಾತಿಗಿಳಿದಿವೆ
ಉಳಿದಿದ್ದ ಅದೆಷ್ಟೋ
ಹೃದಯದ ಧ್ವನಿಗೆ
ಕಿವಿಯಾದೆ

ದುತ್ತನೆ ಕಣ್ಕತ್ತಲೆಗೆ
ಎದೆಬಡಿತವೆ ಕಂಗಾಲು
ಕಾರ್ಮೋಡವೆ
ದಿಕ್ಕು ತಪ್ಪಿ ನನ್ನೆಡೆಗೆ
ಎರಗಿದ ಬಾಸ

ಮೊಗತೋರಿ
ನಗೆ ಬೀರಿದ ಚಂದ್ರಮ
ಈಗ ಆಗಸದಲಿಲ್ಲ
ತಿಳಿನೀರಿನಲೂ
ಕವಿದ ಮೋಡವೇ
ಸತ್ಯದರ್ಶನ ಮಾಡಿ
ತುಟಿಮುದ್ರಿಸಿತ್ತು
ಮತ್ತೂ ಅದೇ
ಮರುಕಳಿಸುವ ಖಾತ್ರಿ
ಊರ ಜಾತ್ರೆಯಲೂ
ಒಂಟಿ ಭಾವ…..


2 thoughts on “ಸುಮಶ್ರೀನಿವಾಸ್ ಅವರ ಕವಿತೆ-ಬೆಳದಿಂಗಳ ನಗೆ

Leave a Reply

Back To Top