‘ಕವಿತೆ- ನೀ ಕಾಡುತ್ತಿ….’ಲೀಲಾಕುಮಾರಿ‌ ತೊಡಿಕಾನ

ನೀ ಕಾಡುವುದಿಲ್ಲವೆಂದರೆ..
ಸುಳ್ಳಾದಿತು!
ನಿನ್ನ ಮಾತುಗಳು ಮೌನದ
ಗೋರಿಯೊಳಗೆ ಸತ್ತು ಮಲಗಿದಾಗ
ಆ ನಿನ್ನ ಮೌನ‌ ಬಹು ಕಾಡಿತ್ತು..

ಆಗೆಲ್ಲ ಕಾರಣಗಳನ್ನು
ತಾನೇ ಸೃಷ್ಟಿಸಿಕೊಂಡ
ಬಡಪಾಯಿ ಹೃದಯ
ನಿನ್ನ‌‌ ಪರ ವಕಾಲತ್ತು ವಹಿಸಿತ್ತು!

ಆಗಾಗ ಸುಳ್ಳುಗಳ ಬೀಜ‌ ಬಿತ್ತಿ
ಸತ್ಯದ ಮರವಾಗಲೆತ್ನಿಸಿ..
ಸರಿತಪ್ಪುಗಳಿಗೆ ಕನ್ನಡಿಯಾಗದೆ;
ರಭಸದಲಿ ಎದೆ ಮೇಲೆ
ನಡೆದು ಹೋದ ಆ ನಿನ್ನ
ತೂಕದ ಹೆಜ್ಜೆ ಇನ್ನಿಲ್ಲದಂತೆ ಕಾಡುತ್ತದೆ

ಅಷ್ಟಕ್ಕೂ ನನ್ನ ಬದುಕಿನ
ಪರಿಚಿತ ನೂರಾರು ಮುಖಗಳಲ್ಲಿ
ನೀನೊಂದು ಲಘು ಪಾತ್ರವಷ್ಟೇ..
ನಾನೂ..ಸಲೀಸಾಗಿ
ಮರೆತು ಬಿಡುವಷ್ಟು…

ಅದಕ್ಕಿಂತ ಹೆಚ್ಚೇನೂ…
ಆಗಿರಲೇ..ಇಲ್ಲ ನೀ..
ಆದರೂ…ನೀ ಕಾಡುತ್ತಿ…
ನನ್ನೊಳಗಿನ ನಂಬಿಕೆಗಳ ಮೂಟೆಯನ್ನೇ…
ಹೊತ್ತು ಸಾಗಿದಕ್ಕಾಗಿ..
ಬದುಕಿಗೆ ಪಾಠವಾಗಿದ್ದಕ್ಕಾಗಿ….


Leave a Reply

Back To Top