ಕಾವ್ಯಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್
ನಿನ್ನ ನೆನೆದು ನಗುವ ಹಗಲೊಂದು ಸಂಭ್ರಮ
ಕನಸು ಕಂಡು ನಲಿವ ಇರುಳೊಂದು ಸಂಭ್ರಮ
ಪ್ರೇಮ ನಿವೇದಿಸಿಕೊಳ್ಳುವ ಅಗತ್ಯವಿಲ್ಲ
ತಿಳಿಸದೇ ಪ್ರೀತಿಸುವುದೊಂದು ಸಂಭ್ರಮ
ನೀನಾಡದ ಪ್ರತಿ ಮಾತು ಮತ್ತು ಬರಿಸುವುದು
ಹೇಳದ ಮಾತು ಕೇಳುವುದೊಂದು ಸಂಭ್ರಮ
ನೆನೆದು ನಾಚುವ ಮನದ ಪರಿಯು ವಿಸ್ಮಯ
ವಿರಹದಿ ಎರೆವ ಒಲವೊಂದು ಸಂಭ್ರಮ
ಹಣೆಬರಹದಲ್ಲಿರದುದ್ದನ್ನು ಮೆಚ್ಚಿದಳು ವಾಣಿ
ಹೆಸರಿಸದೇ ಬರೆಯುವುದೊಂದು ಸಂಭ್ರಮ
————————
ವಾಣಿ ಯಡಹಳ್ಳಿಮಠ