ಕಾವ್ಯ ಸಂಗಾತಿ
ಡಾ. ಮೀನಾಕ್ಷಿ ಪಾಟೀಲ್
ಗಾಂಧಿ ನೀ ಇದ್ದಿದ್ದರೆ
ಅಪ್ಪ ಮಾಡಿಟ್ಟ ಆಸ್ತಿಗೆ ದಾಯಾದಿಗಳು ಕಾದಾಡಿದಂತೆ ನನ್ನ ದೇಶ ನಿನ್ನ ದೇಶ ಎನ್ನುವ ಕಾಳಗ
ಕತ್ತಿ ಗುರಾಣಿ ಹಿಡಿದು ಕದನಕೆ
ನಿಂತವರ ಮದ್ಯೆ ನೀನಿರಬೇಕಿತ್ತು
ರಕ್ತ ಬೀಜ ಮಹಿಷಾಸುರನಂತಹ
ಬ್ರಿಟಿಷರ ಸಂಹಾರಕ್ಕೆ
ಅಹಿಂಸಯೇ ಅಸ್ತ್ರ ಶಸ್ತ್ರವಾಗಿ
ಸತ್ಯವೇ ರಣರಂಗವಾಯಿತು ಸ್ವಾತಂತ್ರ್ಯ ಹೋರಾಟಕ್ಕೆ
ಬ್ರಿಟಿಷರ ಬಂದೂಕಿನ ಗುಂಡಿಗೆ
ಗುಂಡಿಗೆ ಒಡ್ಡಿದ ನೀನು
ಬಡಕಲು ದೇಹದಲ್ಲೂ ಬಲಾಡ್ಯತನ
ನಿಶಸ್ತ್ರಧಾರಿ ಶಾಂತಿ ದೂತ ನೀನು
ಸ್ವಾತಂತ್ರ್ಯ ಬಂದಾಯಿತು
ಮತ್ತೇಕೆ ನೋವು ಸಂಕಟ
ಭಾರತಮಾತೆಯ ಸಂಜಾತರಿಗೆ
ವಿಜಯೋತ್ಸವದ ಸಂಭ್ರಮ
ಹೌದು ರಕ್ತಪಾತವಿಲ್ಲದ ಹೋರಾಟಕ್ಕೆ ಜಯ
ಆದರೆ ಭಾರತ ಮಾತೆಯ ಮಕ್ಕಳಲ್ಲಿ
ಕೋಮು ದಳ್ಳುರಿ ಬ್ರಿಟಿಷರೇ ವಾಸಿ ಎನಿಸಿರಬೇಕು ನಿನ್ನ ಬೆಂದ ಹೃದಯಕ್ಕೆ
ಹಾಗೆಂದು ಅವರ ಸೇಡು
ಭಾರತದ ಮೇಲಲ್ಲ
ಶಾಂತಿ ಅಹಿಂಸೆಯ ಮೂಲ ಮಂತ್ರದ ಮೇಲೆ
ಅವರ ಬಲಿಷ್ಠ ರಟ್ಟೆಗಳನ್ನು ದುರ್ಬಲಗೊಳಿಸಿದೆ ನೀನು
ಜನತೆಗೆ ತಟ್ಟಿತು ಬ್ರಿಟಿಷರ ಪ್ರತಿಕಾರ
ಅಹಿಂಸೆಗೆ ಉತ್ತರವಾಗಿ ಹಿಂಸೆ
ಮನೆಯೊಳಗಿನ ಬೆಂಕಿ ಮನೆಯನ್ನೇ ಸುಟ್ಟಿತು
ಹಿಂದೂ ಮುಸ್ಲಿಂ ದಳ್ಳೂರಿ
ಮಹಾತ್ಮನ ಸಂಪೂರ್ಣ ಸ್ವರಾಜ್ಯಕ್ಕೆ
ಕೊಡಲಿ ಏಟು ಕೈಕಾಲು ತುಂಡರಿಸಿದಂತೆ
ಭಾರತ ಇಬ್ಬಾಗ
ಭಾರತ ಮಾತೆ ಅಂಗವಿಕಲೆ
ಕೋಮು ದಳ್ಳುರಿ ಬೆಂಕಿಯನು
ಮಹಾತ್ಮನ ಬೊಗಸೆಯಲ್ಲಿಟ್ಟು
ಅಟ್ಟಹಾಸ ಮೆರೆದರಿವರು
ಭಾರತಮಾತೆಯ ಒಡಲಿನ ಬೆಂಕಿಗೆ ತುಪ್ಪ ಸುರಿದರು
ಮಹಾತ್ಮನ ಹೃದಯಕ್ಕೆ ಕೋಮು ಬರೆ ಸ್ವಾತಂತ್ರೋತ್ಸವಕ್ಕೆ ಬಹಿಷ್ಕಾರ ಎಂದ ಮಹಾತ್ಮ
ನಂದಾದೀಪದಂತೆ ದೇಹ ಉರಿಸಿ
ಕೋಮು ದಳ್ಳುರಿಯ ಬೆಂಕಿಯ ಶಮನ
ಅಂದು ಬ್ರಿಟಿಷರು ಹೊತ್ತಿಸಿದ ಕೋಮು ದಳ್ಳೂರಿ ಇಂದಿಗೂ ಉರಿಯುತ್ತಿದೆ
ನಮ್ಮ ನಮ್ಮ ಮನೆಗಳಲ್ಲಿ
ಎಲ್ಲರೂ ನಮ್ಮವರೇ ಎಂದ ಮನಗಳಲ್ಲಿ
ಗಾಂಧಿ ನೀನಿದ್ದಿದ್ದರೆ
ಖಂಡಿತವಾಗಿ ಒಂದುಗೂಡಿಸುತ್ತಿದ್ದೆ ಎಲ್ಲರನೂ
ಕೂಡಿ ಬಾಳಿದವರ ಭಾವೈಕ್ಯ
ಸ್ವರ್ಗ ತೋರಿಸುತ್ತಿದ್ದೆ
ಡಾಕ್ಟರ್ ಮೀನಾಕ್ಷಿ ಪಾಟೀಲ್