ಗಣೇಶ್ ವಂದಗದ್ದೆ ಅವರ ಕವಿತೆ-‘ವಸಂತದ ಚೆಲುವೆ’

ವಸಂತ ಕಾಲದಲಿ ಚಳಿಗಾಳಿ ಬೀಸಿರಲು
ಅಂದು ನಾ ಹೊರಟಿದ್ದೆ ಕನ್ಯೆಯನರಸುತ್ತ
ಕರಾಳ ಕಗ್ಗತ್ತಲ ನನ್ನ ಮುತ್ತಿಕೊಂಡಿರಲು
ದಾರಿ ಕಾಣಲೆ ನಾನು ಬಳಲಿ ಬೆಂಡಾಗಿದ್ದೆ

ಇಂತು ನೋವಿನಲಿ ತೊಳಲಾಡುತಿರುವಾಗ
ದೇವ ಕನ್ನಿಕೆಯೋರ್ವಳು ಎದುರಿಗೆ ಬಂದಳು
ಆದರಿಸಿ ಉಪಚರಿಸಿ ನನ್ನ ಸ್ವಾಗತಿಸುತಲವಳು
ಕಿಂಚಿತ್ತು ಯೋಚಿಸದೆ ಮನೆಗೆ ಕರೆದೊಯ್ದಳು

ಆ ಸುಂದರಿಗೆ ನಾನು ತಲೆ ಬಾಗಿ ನಮಿಸುತ
ಅವಳ ಆದರಾತಿಥ್ಯಕೆ ವಂದನೆಯನರ್ಪಿಸಿದೆ
ಅಂದು ಮಲಗಿ ನಿದ್ರಿಸಲು ಶಯನ ನೀಡೆಂದು
ಅಂಜುತಲೆ ಅಳುಕುತಲೆ ಅವಳ ಬೇಡಿದೆನು

ಕನಸಿನಲು ಮನಸಿನಲು ನಾನೆಣಿಸದಂತಹ
ಬೆಚ್ಚನೆಯ ಹಾಸಿಗೆಯ ನನಗಾಗಿ ಹಾಸಿದಳು
ತಳುಕುತ್ತ ಬಳುಕುತ್ತ ಆ ಸುರಸುಂದರಾಂಗಿ
ಸುಖವಾಗಿ ಪವಡಿಸಿ ನಿದ್ರಿಸೆಂದರುಹಿದಳು

ನನಗೆ ಮಲಗೆನುತ ದೀಪವನು ಆರಿಸುತ
ಒಳಗೆ ನಡೆದಳು ಅವಳು ತನ್ನ ಕೋಣೆಗೆ
ಇನ್ನೆರಡು ದಿಂಬುಗಳು ಬೇಡಿಕೆಯನಿಡುತ
ಅವಳ ನಾ ಕರೆದನು ಬಳಿಗೆ ಬಾ ಎನ್ನುತ

ದಿಂಬೆರಡ ತಂದು ತಲೆಯಡಿುಡುತಲಿ
ತುಂಬ ಗೌರವದಿ ನನ್ನ ಸೇವೆ ಮಾಡಿದಳು
ಅದಕಾಗಿ ಗೌರವ ಸೂಚಿಸಲು ನಾನಾಗಲೆ
ಹಿಡಿದಪ್ಪುತವಳ ರಮಿಸಲು ಹೊರಟಿದ್ದೆ.

ಮುಜುಗರದಿ ನಸುನಗುತಾ ತರುಣಿಯಾಗ
ದೂರ ಸರಿಯಿರಿ ಎಂದು ನನ್ನ ಬೇಡಿದಳು
ನಿಜವಾದ ಪ್ರೀತಿಯು ನನ್ನ ಮೇಲಿದ್ದರೆ
ಸತಿಯಾಗಿ ನನ್ನ ನೀ ಸ್ವೀಕರಿಸಿ ಎಂದಳು

ಹೊನ್ನಿನಂತೆಯೆ ಮಿಂಚುವ ಆ ತಲೆಗೂದಲು
ದಂತದಂತೆಯ ಹೊಳೆಯುವ ಆ ಹಲ್ಲುಗಳು
ನೋಡು ನೋಡುತ ನಾನವಳ ಮೋಡಿಗೆ ಬಿದ್ದೆ
ಹೇಗೆ ತಿರಸ್ಕರಿಸಲಿ ಅವಳ ಆ ಕೋರಿಕೆಯನು

ತಾಯಿ ಕಳಕೊಂಡು ಒಂಟಿಯಾಗಿಹ ತರಳೆಯ
ನೋವಿನಲಿ ನರಳುತಿಹ ಷೋಡಸಿಯ ಸಂತೈಸಿ
‘ಅಳಬೇಡ, ಅಳಬೇಡ ನನ್ನ ಮುದ್ದಿನ ತರಳೆ
ನಾನಿನ್ನ ವರಿಸುವೆನು ಇಂದು ಸಂಜೆಯೆ’ಎಂದೆ

ಹೀಗೆ ಒಲಿದಳು ನನಗೆ ನಗುಮೊಗದ ಚೆಲುವೆ
ಆ ಸಂಜೆಯೆ ನಡೆಯಿತು ನಮ್ಮಿಬ್ಬರ ಮದುವೆ
ನಾವಿಬ್ಬರೂ ಈಗ ಸಂತಸದಿ ಬದುಕಿರುವೆವು
ನೂರ್ಕಾಲ ಬದುಕಲು ನೀವು ಹರಸಿ ನಮ್ಮನು


Leave a Reply

Back To Top