ಕಾವ್ಯ ಸಂಗಾತಿ
ಡಾ. ಮೀನಾಕ್ಷಿ ಪಾಟೀಲ್
‘ಯಾಕೀ ಯುದ್ಧ’
ಹಿಂದೊಮ್ಮೆ ಕೇಳಿದ್ದೆ
ಇತಿಹಾಸದ ಕಥೆಯ
ಫ್ರೆಂಚರು ಇಂಗ್ಲಿಷರ
ನಡುವೆ ನಡೆದ ಕದನ
ಈಗ ಇಸ್ರೇಲ್ ಹಮಾಸ್
ಯುದ್ಧ ರಣ ಕೇಕೆ ಹಾಕುತ್ತಿದೆ
ಅಮಾಯಕ ಜೀವಗಳ
ಹೊಸಕಿ ಹಾಕಲು
ಧರ್ಮ ಯುದ್ಧವೊ
ಅಸ್ತಿತ್ವದ ಪ್ರಶ್ನೆಯೊ
ಎರಡು ಪಂಥಗಳ ಘರ್ಷಣೆ
ಒಬ್ಬರನ್ನೊಬ್ಬರು ಮುಗಿಸಲು
ಗುಂಡಿನ ಸುರಿಮಳೆ
ರಾಕೆಟ್ಟಿನ ದಾಳಿ
ಟ್ಯಾಂಕರ್ ಗಳ ಆರ್ಭಟ
ಉಗುಳುತ್ತಿವೆ ಬೆಂಕಿ
ಹಿರಿದಾದ ಕಾಳಗ
ಬೊಬ್ಬಿರಿದು ಬೀಗಿರಲು
ನಲುಗಿವೆ ಕಂದಮ್ಮಗಳು
ಕಣ್ಣೀರಿಟ್ಟಿದೆ ತಾಯತನದ ಕರುಳು
ಗಡಿ ಆಚೆ ಈಚೆ
ದೂರವೇನಿಲ್ಲ ಎಲ್ಲ ನಮ್ಮವೇ
ಕಂದಮ್ಮಗಳು ಕಂಗೆಟ್ಟಿವೆ
ಕಾಣದೆ ಕರುಣೆಯ ಕೈಗಳ
ಈ ದಡದ ಮಗುವಿಗೆ
ಅನ್ನ ಆರೈಕೆ ಆಟಿಕೆ
ಆ ದಡದ ಮಗುವಿನ
ಗಾಯಕ್ಕೆ ಸಿಗದ ಮುಲಾಮು
ಯಾಕೆ ಈ ನರಮೇಧ
ತಪ್ಪೇ ಮಾಡದ
ಹಾಲು ಗೆನ್ನೆಯ ಹಸುಗೂಸುಗಳ
ಮಾರಣಹೋಮ
ಇಸ್ರೇಲ್ ಒಬ್ಬನ ಕೊಲೆಗೆ
ಹತ್ತಿಪ್ಪತ್ತು ಹಮಾಸರು
ಬಲಿಯಾದರು ಕುರಿ ಕೋಳಿಗಳಂತೆ
ಸೇಡು ತೀರಿಸಲೊ ಶಕ್ತಿ ತೋರಿಸಲೊ
ನುಗ್ಗಿ ಬರುವರು ಕಡಲು
ಉಕ್ಕೇರುವಂತೆ ಉನ್ಮತ್ತರಾಗಿ
ಸಿಡಿ ಮದ್ದು ಕಾರುತ್ತಾ
ಬೆಂಕಿ ಬಾಯಲ್ಲಿ
ಅವರ ಮುಂದಿದೆ
ರಷ್ಯ ಉಕ್ರೇನ್ ಯುದ್ಧ
ಆದರೂ ಅರಿವಿಲ್ಲ
ಅರವಳಿಕೆ ಆವರಿಸಿರಲು
ಏನಿದ್ದರೇನು ಮಾನವ
ಪ್ರೇಮಕೆ ಬೆಲೆ ಇಲ್ಲ
ಬೆಲೆ ಇರುವುದೆಲ್ಲ
ಭೂಮಿ ಭೋಗದ ಆಸೆ
ಡಾ. ಮೀನಾಕ್ಷಿ ಪಾಟೀಲ್