ಕಾವ್ಯಸಂಗಾತಿ
ಶೋಭಾ ಮಲ್ಲಿಕಾರ್ಜುನ್
ಸಾಕ್ಷಿ
ಸಮಯವೇ ಸ್ವಲ್ಪ ನಿಲ್ಲುವೆಯಾ. . . .
ನಮ್ಮೀ ನಗುವಿಗೆ ಸಾಕ್ಷಿಯಾಗುವೆಯಾ….
ಹಗಲಿನಲೂ ಚುಕ್ಕಿಗಳು ಬಗಲಲಿರುವಂತೆ
ಇರುಳಿನಲೂ ಹೊಂಗಿರಣ ತುಂಬಿ ತುಳುಕಿದಂತೆ
ಒಡನಾಡಿಗಳು ನಾವು ಗೂಡಿನೊಳಗೂಡಿದೆವು
ಜೊತೆಗೂಡಿ ಒಮ್ಮನದಿ ಬಾಳತೇರ ಎಳೆದೆವು
ಸಮಯವೇ ಸ್ವಲ್ಪ ನಿಲ್ಲುವೆಯಾ….
ನಮ್ಮೀ ಒಲವಿಗೆ ಸಾಕ್ಷಿಯಾಗುವೆಯಾ….
ಬಚ್ಚಿಟ್ಟ ನೋವುಗಳ ಬಿಚ್ಚಿಟ್ಟು ಸಂಭ್ರಮಿಸಿ
ಉಸಿರ ಉಸಿರಲಿ ಬೆರೆಸಿ ಕರುಳ ಬಳ್ಳಿಯ ಭುವಿಗಿಳಿಸಿ
ನೊಂದರೂ ಕಬ್ಬಿನ ರಸದಂತೆ ಬೆಂದರೂ ಸಿಹಿ ಶಾವಿಗೆಯಂತೆ
ಬಾಳಯಾನದಿ ಮುಳ್ಳನುಂಗಿ ಹೂವನರಳಿಸಿದಂತೆ
ಸಮಯವೇ ಸ್ವಲ್ಪ ನಿಲ್ಲುವೆಯಾ…
ನಮ್ಮೀ ನಲುಮೆಗೆ ಸಾಕ್ಷಿಯಾಗುವೆಯ….
ಬಿಳಿಯ ಬಣ್ಣದೊಳು ಕಾಮನಬಿಲ್ಲನೇ ಕಾಣುತ
ಬಾಳ ಕೊಳದೊಳಗೆ ಕಮಲಗಳನೇ ನೋಡುತ
ಕರಗುತಿದೆ ಜೀವನ ಎದೆಗೊರಗುತ
ನಲಿವೆವು ವಸಂತಗಳ ಹಿಂದಾಕುತ
ಶೋಭಾ ಮಲ್ಲಿಕಾರ್ಜುನ್
ಸಮಯವನ್ನೇ ನಿಲ್ಲುವಂತೆ ಕೋರುವ ಕವಯತ್ರಿಯ ಭಾವಪೂರ್ಣ ನಿವೇದನೆಯೇ ಸೊಗಸಾದ ಕಾವ್ಯವಾಗಿ ಓದುಗರ ಹೃದಯ ತಟ್ಟುತ್ತದೆ.”ಸಂಗಾತಿ”ಗೂ ಕವಯಿತ್ರಿಗೂ ಧನ್ಯವಾದಗಳು ಮತ್ತು ಹಾರ್ದಿಕ ಅಭಿನಂದನೆಗಳು, ಶುಭವಾಗಲಿ
ನಿಮ್ಮ ಸಂಗಾತಿಯ ಬಾಳ ಬದುಕಲಿ ನೀವೇ ಕೊಳಲುಲಿಯಾಗಿ,ಸುಖ ಸ್ವಪ್ನ ಅನುರಾಗಗಳ ಹೊಮ್ಮಿಸಿ. *ಶುಭ ಹಾರೈಕೆಗಳು* ಕವಿತೆ ಇಷ್ಟವಾಯಿತು.