ಮಧು ಕಾರಗಿ ಅವರ ಕವಿತೆ-ಸಿಟಿಬಸ್

ಹಸಿರು ಬಣ್ಣದ ಸಿಟಿಬಸ್ಸೊಂದು
ಪ್ರತಿದಿನದ ಅದೇ ವೇಳೆಗೆ
ಬಂದು ನಿಲ್ಲುತ್ತದೆ ಅವಳ ನಿಲ್ದಾಣಕ್ಕೆ
ಯಾಂತ್ರಿಕ ಬದುಕಿನ ಖಾಸಾ ಅಸಾಮಿಯಂತೆ !

ಆಫೀಸಿಗೆ ,ಕಾಲೇಜಿಗೆ, ಶಾಲೆಗೆ
ಮತ್ತೆಲ್ಲಿಗೋ
ಹೋಗುವವರಿಲ್ಲ ಹತ್ತುತ್ತಾರೆ
ಇವಳೊಂದಿಗೆ ದೌಡಾಯಿಸಿ
ಕುಳಿತುಕೊಳ್ಳುವ ಸೀಟಿಗಾಗಿಯೇ
ಈಗೀಗ ರಾಜಕೀಯ ಸದನದಲ್ಲಿ
ಪೈಪೋಟಿ ನಡೆಯುತ್ತದಲ್ಲ
ಥೇಟ್ ಅದೇ ರೀತಿ !

ನಿರ್ವಾಹಕನ ಟಿಕೆಟ್ ಟಿಕೆಟ್ ?
ಪ್ರಶ್ನೆಗೆ ಉತ್ತರವೊಂದನ್ನು ಬಿಟ್ಟರೆ
ಯಾರೊಂದಿಗೆ ಯಾರ ಮಾತುಗಳು ನಡೆಯುವುದಿಲ್ಲ ಸ್ಮಾರ್ಟ್ ಫೋನುಗಳಲ್ಲಿ ಬಂಧಿಯಾಗಿ ತುರುಕಿಕೊಂಡಿರುತ್ತಾರೆ
ಎರಡು ಬದಿಯ ಕಿವಿಗಳಿಗೂ
ಇಯರ್ ಫೋನುಗಳನ್ನು

ಜನರ ಶಿಸ್ತಾದ ಆಕರ್ಷಕ ಉಡುಗೆ
ವಿಚಿತ್ರ ಪರ್ಫ್ಯೂಮ್ಗಳ ವಾಸನಾ ಪ್ರಪಂಚ
ವಿಚಿತ್ರ ವಿನ್ಯಾಸಗಳ ವ್ಯಾನಿಟಿ ಬ್ಯಾಗ್
ಬೆರಗಾಗಿಸುತ್ತವೆ ಅವಳನ್ನು
ಬೆರೆಗು ಎಷ್ಟು ಕಾಲ ?
ಮಾಸಿದ ಸೀರೆ ಉಟ್ಟು
ಆಧಾರಕಾರ್ಡಿನೊಂದಿಗೆ ಒಂದಿಷ್ಟು ಪುಡಿಗಾಸು
ಹಿಂದಿನ ರಾತ್ರಿಯ ತಂಗಳನ್ನದ ಬುತ್ತಿಡಬ್ಬಿ ಕಟ್ಟಿಕೊಂಡವಳಿಗೆ!

ತಲೆಕೊಡವಿಕೊಂಡು ಬಸ್ಸನಿಳಿಯುತ್ತಾಳೆ
ಪಕ್ಕದ ಮನೆಯಲ್ಲಿ
ಮಗಳನ್ನು ಆಟಕ್ಕೆ ಬಿಟ್ಟು ಬಂದ ಅವಳಿಗೆ
ಚಿಕ್ಕದೊಂದು ಗೊಂಬೆಕೊಳ್ಳಬೇಕೆನಿಸುತ್ತದೆ
ಚೌಕಾಸಿಗೆ ಸಮಯವಿಲ್ಲ
ಕೇಳಿದಷ್ಟು ಕೊಡುವ ಹಣವೂ ಇಲ್ಲ!

ತಡವಾಗಿ ಹೋದರೆ
ಅರ್ಧ ದಿನದ ಸಂಬಳ ಮುರಿದುಕೊಳ್ಳುತ್ತಾನೆ
ಅವಳು ಕೆಲಸ ಮಾಡುವ
ಕಾರ್ಖಾನೆಯ ಮ್ಯಾನೇಜರ್
ಓಡುತ್ತಾಳೆ ತಾನೇ ಕಾಲಿಗೆ
ಚಕ್ರ ಕಟ್ಟಿಕೊಂಡವಳಂತೆ
ಯಾಂತ್ರಿಕ ಬದುಕಿನ ರಾಯಭಾರಿಯಂತೆ !


2 thoughts on “ಮಧು ಕಾರಗಿ ಅವರ ಕವಿತೆ-ಸಿಟಿಬಸ್

Leave a Reply

Back To Top