ಕಥಾ ಸಂಗಾತಿ
ರಾಜು ನಾಯ್ಕ
“ಕಸಬರಿಗೆಯ ನಿವೇದನೆ”
ನಾನ್ಯಾರೆಂಬುದನ್ನೆ ಮರೆತು ಮೂಲೆಯಲ್ಲಿ ಕುಳಿತು ಕಣ್ಣೀರು ಸುರಿಸುತ್ತಿರುವಾಗ ನನ್ನ ಕತೆಯನ್ನು ಹೇಳಿಕೊಳ್ಳುವ ಅವಕಾಶವೊಂದು ಬಂತು. ಈ ಹೊಸತಲೆಮಾರಿನ ಕಥೆಗಾರರು ವಿಷಯ ಹುಡುಕುತ್ತಾರೆ.ಅಂತವರ ಕಣ್ಣಿಗೆ ನಾವೆಲ್ಲ ಬಣ್ಣದ ಕುಂಚದಂತೆ ಕಂಡಾಗ ನಮ್ಮ ಬದುಕು ಕ್ಷಣದ ಮಟ್ಟಿಗೆ ಸಾರ್ಥಕವಾದ ಭಾವ ಮೂಡುತ್ತದೆ…ಈಗ ನಾನು ಕತೆ ಹೇಳಲು ಶುರು ಮಾಡುವೆ..ಇದು ನನ್ನದೆ ಕತೆ…ನಾನು ಪ್ರತಿ ಮನೆಯಲ್ಲಿ ಸ್ವಚ್ಛತೆಗಾಗಿ ಬಳಕೆಯಾಗಿ ಅವರು ನಲಿವಿಗೆ ಕಾರಣವಾಗಿದ್ದೆ.ನನ್ನ ಹಿಡಿಯದಿದ್ದವರೇ ವಿರಳ. ಪುರುಷಗಿಂತ ಮಹಿಳೆಯರ ಕೋಮಲ ಕರದಲ್ಲಿ ನಲಿದಿದ್ದೆ ಜಾಸ್ತಿ.ಕೆಲವೊಮ್ಮೆ ಅವರು ಕೋಪಗೊಂಡಾಗ ಆಯುಧವಾಗಿದ್ದು ಇದೆ.ಅಷ್ಟು ಬಿಟ್ಟರೆ ನನ್ನ ಮೇಲೆ ಗುರುತರ ಆರೋಪವೇನು ಇಲ್ಲ..
ನಾನು ನನ್ನ ಪ್ರೀತಿಸಿದವರ ಮನೆಯ ಎಲ್ಲಾ ಹೊಲಸು ಕಸಕಡ್ಡಿಗಳನ್ನು ಹೊರಹಾಕುತ್ತಿದ್ದೆ.ಅವರು ನನ್ನ ಹಿಡಿದಾಗ ಏನೋ ಪುಳಕ ಇಂದಾದರು ನನ್ನ ಪರಿಪೂರ್ಣ ಪ್ರೀತಿಸುತ್ತಾರೇನೊ ಅಂತಾ.. ಒಂದು ಬಗೆಯ ಆನಂದದ ಭಾವ ಬಂದಾಗಲೇ ಅವರು ನನ್ನ ಬಳಸಿ ಮೂಲೆಯಲ್ಲಿ ಬಿಟ್ಟು ಇದೇ ನಿನ್ನ ವಾಸಸ್ಥಳ ಇಲ್ಲಿಯೇ ಬಿದ್ದಿರು ಎಂದು ಮೂಲೆಯೊಂದರಲ್ಲಿ ನನ್ನ ಬಿಟ್ಟು ಹೋಗುತ್ತಾರೆ.ನಾನು ಅಲ್ಲಿಯೆ ಕುಳಿತು ಯೋಚಿಸುತ್ತಿದ್ದೆ ಹಾಗೆ ನೋಡಿದರೆ ದಿನಾ ನನಗೆ ಮೂಲೆಯೇ ಗತಿ,ಒಮ್ಮೊಮ್ಮೆ ಅಟ್ಟ ಏರಿದ್ದೂ ಇದೆ.ನನ್ನ ಕತೆ ಹೇಳುವ ಮೊದಲು ನಿಮಗೆ ನನ್ನ ಹೆಸರು ಹೇಳುವೆ ನನಗೆ ಅಪ್ಪ ಅಮ್ಮ ಇಟ್ಟು ಹೆಸರು ತಿಳಿದಿಲ್ಲ. ಒಂದೊಂದು ಮನೆಯವರು ಒಂದೊಂದು ಹೆಸರಿಂದ ಕರೆದ್ದಿದ್ದಾರೆ.ಆದರೂ ಒಟ್ಟಾರೆಯಾಗಿ ಕಸಬರಿಗೆ ಎಂಬ ರೂಢನಾಮವೇ ನನಗೆ ಗತಿಯಾಯಿತು..’ಜಾಡು’, ‘ಹಿಡಿಕಟ್ಟು’ ‘ಪೊರಕೆ’ ‘ಹಿಡಿ’ಇವೆಲ್ಲ ನನ್ನ ಉಪನಾಮಗಳು..ನನ್ನ ಹುಟ್ಟು ಅನೇಕ ಮೂಲಗಳಿಂದ ಆಗುತ್ತದೆ..ಕಾಡುಕಡ್ಲೆಗಿಡ,ಈಚಲು ಹುಲ್ಲು,ತೆಂಗಿನ ಗರಿ,ತಾಳೆಗರಿ ಇವೆಲ್ಲ ನನ್ನ ಹುಟ್ಟಿಗೆ ಕಾರಣವಾದ ಮೂಲವೆಂದೇ ಹೇಳಬೇಕು…ಕತೆ ಬರೆಯುವಾಗ ನೆನಪಿಡಿ ನಾನು ಸ್ವಚ್ಛ ಸಮಾಜ ನಿರ್ಮಾಣಕ್ಕೆ ನೀಡಿದ ಕೊಡುಗೆ ಅಪಾರ. ಲಕ್ಷಾಂತರ ಜನ ನನ್ನ ಹಿಡಿದುಕೊಂಡೆ ಜೀವನ ಮಾಡುತ್ತಾರೆ..ದೇಶದ ರಾಜನ ಮನೆಯಿಂದ ನಿರ್ಗತಿಕ ಬಡವನ ಮನೆಯವರೆಗು ನನಗೆ ಜಾಗವಿದೆ.
ನನ್ನ ಆತ್ಮ ನಿವೇದನೆ ಮಾಡಿಕೊಳ್ಳುವ ಹಂಬಲ ಲಾಗಾಯ್ತಿನಿಂದಲು ಇತ್ತು. ಮನುಷ್ಯರ ಮನೆಯನ್ನು ಸ್ವಚ್ಛಗೊಳಿಸಿ,ಅವರ ಮನೆ ಅಂಗಳ ಕೊಟ್ಟಿಗೆ,ಬಚ್ಚಲು ಮನೆಯನ್ನೆಲ್ಲ ಸ್ವಚ್ಛಗೊಳಿಸಿದರೂ ನನ್ನ ವಾಸಸ್ಥಳ ಮಾತ್ರ…ಮನೆಯ ಮೂಲೆಯೇ ಆಗಿದ್ದು ವಿಪರ್ಯಾಸ… ಕೆಲವೊಮ್ಮೆ ನನಗೆ ಸ್ನಾನ ಮಾಡಿಸಿದ್ದು ಇದೆ ಬಹುತೇಕ ಸಂದರ್ಭದಲ್ಲಿ ಸ್ನಾನವಿಲ್ಲದೆ ಮೂಲೆಯಲ್ಲಿ ಕುಳಿತು ಏಕಾಂತದಲ್ಲಿ ಸುರಿಸಿದ ಕಣ್ಣೀರೇ ನನಗೆ ಸ್ನಾನ….ಇಂದು ಪ್ರೀತಿಯಿಂದ ನೀವು ಬಂದು ಮಾತನಾಡಿಸಿದಾಗ ನನ್ನ ಕತೆ ಹೇಳಿಕೊಂಡೆ. ನೀವು ಕತೆಗಾರರೆಂದು ಕೇಳಿದ್ದೆ.ಮೊನ್ನೆ ನೀವು ನಿಮ್ಮ ಹಳೆಯ ಟ್ರಂಕಿನ ಮೇಲಿನ ಧೂಳು ಒರೆಸಲು ನನ್ನ ಬಳಕೆ ಮಾಡಿದ್ದಿರಿ.ಆಗಲೆ ಕತೆ ಬರೆವ ನಿಮ್ಮ ಕೈಯಲ್ಲಿ ಕತೆಯಾಗಿ ಅರಳಬೇಕು ಎಂಬ ಆಸೆ ಇತ್ತು..ಮೂಲೆಯಲ್ಲಿ ಕುಳಿತು ಪೂರ್ಣ ಜೀವನ ಕಳೆದ ನನಗೆ ಒಂದು ಕತೆಯಾಗಿ ನಾನು ಯಾರೆಂದು ಪ್ರಚಾರಕ್ಕೆ ಬರುವಂತೆ ಮಾಡಿದ ನಿಮಗೆ ನನ್ನ ನಮನವೆಂದ ಕಸಬರಿಗೆ… ನೀವು ಬರೆವ ಕತೆಯಲ್ಲಿ ಕೃತಘ್ನತೆ, ಹಾಸ್ಯ,ಕರುಣಾರಸಗಳ ಮಿಶ್ರಣವಿರಲಿ ಅದೇ ತಾನೆ ನಾನು ಜೀವನ ಪೂರ್ತಿ ಅನುಭವಿಸಿದ್ದು ನನಗೆ ಮನುಷ್ಯರ ಮನಸ್ಸನ್ನು ಗುಡಿಸಿ ಸ್ವಚ್ಛ ಮಾಡುವ ಹಂಬಲವಿತ್ತು.ಹಾಗೆ ನಾನು ನನ್ನ ಸಹಪಾಠಿಗಳೆಲ್ಲ ಸೇರಿ ಒಮ್ಮೆ ಮುಷ್ಕರ ಮಾಡಿ ನ್ಯಾಯಕ್ಕೆ ಬೇಡಿಕೆ ಇಡುವ ಇರಾದೆಯೂ ಇತ್ತು.. ನಾವೇನಾದರು ಒಂದು ತಿಂಗಳು ಮುಷ್ಕರ ಮಾಡಿದರೆ ನಿಮ್ಮ ಸ್ಥಿತಿ ಏನಾಗುವುದೊ ನೋಡಿ..ಲಕ್ಷಾಂತರ ವೈರಸ್ಸುಗಳು ಬ್ಯಾಕ್ಟೀರಿಯಾಗಳು ಹುಟ್ಟಿ ನಿಮ್ಮ ಜೀವನ ನರಕವಾಗುವುದಿಲ್ಲವೆ? ಆ ಆಸೆಗಳು ಇಂದಿಗು ಹಾಗೆ ಇದೆ.. ಎಂಬ ಬಿನ್ನಹ ಮಾಡಿ ತಾನು ಮೌನವಾಯಿತು…
ಮೌನವು ಕೆಲವೊಮ್ಮೆ ದೌರ್ಬಲ್ಯವೇ ಆಗುತ್ತದೆ.ಒಳ್ಳೆಯ ದಿನಗಳ ನಿರೀಕ್ಷೆ ಮಾಡಿದ ನಮಗೆ ನಮ್ಮದಲ್ಲದ ಬದುಕು ನಿರಾಶೆಯ ಮೂಟೆಯನ್ನು ತಲೆಯಮೇಲೆ ಹೊರಸಿ ಕುಳಿತುಕೊಳ್ಳುತ್ತದೆ.. ಮೌನದ ಮಾತುಗಳು ನಲಿವಾಗುವುದೇ ಇಲ್ಲ.ನಲಿವಿನ ಬಾಳು ನಮ್ಮದಲ್ಲವೆಂಬ ಅರಿವಿದ್ದರೂ,ನಲಿವಿಗಾಗಿ ಹಂಬಲಿಸುವ ಮನಸು ನಮಗಿರುತ್ತದೆ…ನಮ್ಮ ಉಪಕಾರದ ಸ್ಮರಣೆಯಿಂದಲಾದರು ಅಂತಕರಣವುಳ್ಳವರ ಕೈಯಲ್ಲಿ ಸಿಕ್ಕಿ ಕತೆಯೋ ಕವನವೋ ಆಗಬೇಕೆಂಬ ತುಡಿತವಿರುತ್ತದೆ ಇಂದೇಕೊ ಮನಸು ನಿರಾಳವಾಯಿತು.ಹಾಗೆಂದು ಮನಸಲ್ಲಿ ಯೋಚಿಸುತ್ತಿದ್ದ ಕಸಬರಿಗೆ ಕೃತಜ್ಞತೆಯ ಕಣ್ಣಿಂದ ಆ ಕತೆಗಾರನ ಮುಖವನ್ನೆ ದಿಟ್ಟಿಸುತ್ತಿತ್ತು…
ರಾಜು ನಾಯ್ಕ