ಕಾವ್ಯಸಂಗಾತಿ
‘ಸಂಸಾರದ ಗುಟ್ಟು’
ನಾಗರಾಜ ಜಿ. ಎನ್. ಬಾಡ
ನಾಲ್ಕು ಗೋಡೆಯ ನಡುವೆ
ಇರಬೇಕು ಸಂಸಾರದ ಗುಟ್ಟು
ಜಗಜ್ಜಜಾಹೀರಾತು ಮಾಡಿಕೊಂಡರೆ
ಮನದ ನೆಮ್ಮದಿಗೆ ಪೆಟ್ಟು
ಓರೆಕೋರೆಗಳ ತಿದ್ದಿಕೊಂಡು
ಮುನ್ನಡೆಯುತ್ತಿರಬೇಕು ನಾವು
ಸಂಸಾರ ಎಂದ ಮೇಲೆ ಇದ್ದದ್ದೇ
ಸಿಹಿಕಹಿ ಬೇವುಗಳ ಮಿಶ್ರಣವು
ಮರೆಯುತ್ತಿರಬೇಕು ಆಗಾಗ
ಬಂದು ಹೋಗುವ ನೋವು
ಸುಮ್ಮನೆ ಹೆಚ್ಚಿಸಿಕೊಳ್ಳಬಾರದು
ಸಂಸಾರದೊಳಗೆ ಅನಾವಶ್ಯಕ ಕಾವು
ಅವರವರ ಲಾಭಕ್ಕೆ ಬೆಂಕಿ ಹಚ್ಚಲು
ಹವಣಿಸುವವರೇ ಇಲ್ಲಿ ಎಲ್ಲಾ
ಮಾತಿನ ಘರ್ಷಣೆ ಕಡಿಮೆ ಆದಷ್ಟು
ಬದುಕು ಸಿಹಿಬೆಲ್ಲ
ಸಮಸ್ಯೆಗಳಿರದ ಸಂಸಾರವಿಲ್ಲ
ಎಲ್ಲರ ಮನೆಯ ದೋಸೆಯು ತೂತೇ
ಪ್ರೀತಿ ಆತ್ಮೀಯತೆಯ ಉಳಿಸುವುದು
ಕೇವಲ ಹೊಂದಾಣಿಕೆಯ ಮಾತೇ
ಕುಹಕ ಮಾತುಗಳ ತೊರೆದಾಗ
ಮನವು ಹಗುರಾಗುವುದು
ಬದುಕು ಸಾಂಗವಾಗಿ ತಾಪತ್ರಯಗಳ
ದಾಟಿ ಮುಂದೆ ಸಾಗುವುದು
ಮಾತು ಮನೆ ಮನಸುಗಳನ್ನು
ಕೆಡಿಸದೆ ಎಲ್ಲರನ್ನೂ ಒಗ್ಗೂಡಿಸಬೇಕು
ಜೊತೆಗಿರುವ ಹಿತಶತ್ರುಗಳ ಮಾತುಗಳಿಂದ
ಆದಷ್ಟು ದೂರ ದೂರ ಇರಬೇಕು
ನೆಮ್ಮದಿಯ ಬದುಕನ್ನು ಹುಡುಕದೆ
ನಾವೇ ನಮ್ಮೊಳಗೇ ಕಂಡುಕೊಳ್ಳಬೇಕು
ಋಣಾತ್ಮಕ ಭಾವನೆಗಳ ತೊರೆದು
ಕ್ರಿಯಾಶೀಲರಾಗಿ ಮುನ್ನುಗ್ಗಬೇಕು
ನಮ್ಮ ನಮ್ಮ ಬದುಕನ್ನು
ನಾವೇ ರೂಪಿಸಿಕೊಂಡು
ಸ್ವಚ್ಛಂದವಾಗಿಟ್ಟುಕೊಳ್ಳಬೇಕು
ನಾಗರಾಜ ಜಿ. ಎನ್. ಬಾಡ
Super sir