ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ- ಪ್ರೀತಿಯ ನೆನಪಲ್ಲಿ

ಪ್ರೀತಿ ಎದೆಯ ಗೂಡಲ್ಲಿ
ಮಿಡುಕಿ ಮಿಡುಕಿ, ಸದ್ದು ಮಾಡಿ
ತಣ್ಣಗಾದದ್ದು ಇನ್ನೂ ನೆನಪಿದೆ
ಬಾನೆತ್ತರಕ್ಕೆ ಚಾಚಿಕೊಂಡ
ರೆಂಬೆ ಕೊಂಬೆಗಳ ಕತ್ತರಿಸಿ
ಕಡಿಯದೆ ಬಿಟ್ಟ
ತಬ್ಬಿಕೊಂಡ ಬೊಡ್ಡೆಯ
ಮುಂದಿನ ಮುಂಗಾರಿಗೆ
ಮತ್ತೆ ಚಿಗುರಿದ
ರೆಂಬೆ ಕೊಂಬೆಗಳ ಕಂಡು
ಒಳಗೊಳಗೆ
ಅರಳಿದ ಪ್ರೀತಿಗೆ
ಆಕಾಶಕ್ಕೆ ಏಣಿ
ಕೂಡಿದ ಕೂಟಗಳ
ಆಡಿದ ಬೇಟಗಳ
ಲೆಕ್ಕವಿಲ್ಲ
ಒಸರುವ ಪ್ರೀತಿ
ಜಿನುಗುವ ಭಾವದೊಂದಿಗೆ
ಬೆರೆತು ಹರಳುಗಟ್ಟಿದೆ
ಎದೆಯಲಿ
ನಿನ್ನ ಸ್ನೇಹದ ಬೆಳಕು
ಬಾಳ ಕತ್ತಲೆಯ ನೀಗಿ
ಬಿಸಿಲು ಬೆಳದಿಂಗಳಾಗಿ
ಬಾನ ಚುಕ್ಕೆಗಳೆಲ್ಲ ಮುಡಿಯಲ್ಲಿ
ಹೀಗೆ ಜಾರಿ ಹೋದ
ನೆನಪುಗಳು
ಮತ್ತೆ ಸದ್ದು ಮಾಡುತ್ತಿವೆ
ಮನದ ಮೂಲೆಯಲ್ಲಿ
ಸದ್ದಿಲ್ಲದೆ ಸರಿದು ಹೋದ
ಬೈಗು ಬೆಳಗುಗಳ
ಸಾಕ್ಷಿಯನ್ನಿಟ್ಟುಕೊಂಡು


One thought on “ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ- ಪ್ರೀತಿಯ ನೆನಪಲ್ಲಿ

Leave a Reply

Back To Top