ಕಾವ್ಯ ಸಂಗಾತಿ
ಡಾ. ಸುಮಂಗಲಾ ಅತ್ತಿಗೇರಿ
‘ಅವ್ವನ ಜಗಲಿ’
೧
ಅವ್ವನ ದೇವರ ಜಗಲಿಯಲ್ಲಿ
ನೂರಾರು ದೇವರುಗಳು
ಠಿಕಾಣಿ ಹೂಡಿವೆ
ಬಹುದಿನಗಳಿಂದ!
ವರ್ಷ-ವರ್ಷಕ್ಕೆ
ವಿಸ್ತರಿಸುತ್ತಲೇ ಇತ್ತು
ನನ್ನವ್ವನ
ದೇವರ ಸಾಮ್ರಾಜ್ಯ!
ಅವ್ವನ ದೇವರ ಕೋಣೆಯಲ್ಲಿ
ಹಿಂದೂಗಳ ಶಿವನೂ,
ವೈಷ್ಣವರ ಸತ್ಯನಾರಾಯಣನೂ,
ಇಸ್ಲಾಂರ ದೂದಪೀರಾ
ಎಲ್ಲರೂ ಇದ್ದಾರೆ…!
ಜೊತೆಗೆ
ಲಕ್ಷ್ಮಿ-ಸರಸ್ವತಿ-ದುರ್ಗಾ
ಸಾಯಿಬಾಬಾ-ಮೈಲಾರಿ-ಆಂಜನೇಯ
ಇತ್ಯಾದಿ…ಇತ್ಯಾದಿ… ದೇವರುಗಳು
ಸಮಾವೇಶಗೊಂಡಿವೆ
ಜಗಲಿಯೆಂಬ
ಒಂದೇ ವೇದಿಕೆಯಲ್ಲಿ!
ಎಲ್ಲ ದೇವರನ್ನು
ಒಂದೇ ಮನದಿ
ಪೂಜಿಸಿದ ನನ್ನವ್ವ
ನೂರಾರು ದೇವರುಗಳ
ಸಾಮ್ರಾಜ್ಯದ ಒಡತಿ!
ಸರ್ವಧರ್ಮ ಸಮನ್ವಯದ
ಉಪಾಸಕಿ!
೨
ಅವ್ವನ ದೇವರ ಜಗಲಿಯ ಮೇಲೆ
ನೂರಾರು ದೇವರುಗಳ ಸಾಮ್ರಾಜ್ಯ
ಆದರೆ
ನನ್ನ ಬದುಕಿನ ಸಾಮ್ರಾಜ್ಯದಲ್ಲಿ
ದೇವರೆಂದರೆ ಅವ್ವ
ಅವ್ವನೆಂದರೆ ದೇವರು
ನಮಿಸುವೆನು ಅವಳನ್ನೆ
ನೂರಾರು ಬಾರಿ
ಅವ್ವನೆಂದರೆ ನನಗೆ
ಮುಕ್ಕೋಟಿ ದೇವರಿಗೆ ಸಮ!
ಡಾ. ಸುಮಂಗಲಾ ಅತ್ತಿಗೇರಿ
ಅದ್ಭುತ…. ಚೆನ್ನಾಗಿದೆ ಮೇಡಂ ಜೀ….
– ಗುರುಪ್ರಕಾಶ್
ಕಜಾವಿವಿ.
Thanku sir
Nicely written Akka!
Naveen Attigeri