‘ಓ ವಿಧಿಯೇ….., ಈಗ ಭಗವಂತನಿಗೂ ಕರುಣೆ ಇಲ್ಲ..!’.ಐಗೂರು ಮೋಹನ್ ದಾಸ್ ಜಿ.

ಈ ಭೂಮಿಯಲ್ಲಿ ನಿತ್ಯ ನಡೆಯುತ್ತಿರುವ ನೂರಾರು ‘ದುರಂತ’ಗಳನ್ನು ವಿವಿಧ ನ್ಯೂಸ್ ಚಾನೆಲ್ ಗಳಲ್ಲಿ ನೋಡಿದ್ದರೂ, ಮನಕ್ಕೆ ಹೆಚ್ಚಿನ ನೋವು-ಸಂಕಟವಾಗುತ್ತಿರಲಿಲ್ಲ…! ಎಲ್ಲಾವು ವಿಧಿ-ಹಣೆಬರಹ ಎಂದು ಭಾವಿಸಿ, ಗಟ್ಟಿ ಮನಸ್ಸಿನಿಂದ ಮತ್ತೊಂದು ವಿಚಾರದ ಕಡೆಗೆ ಕಣ್ಣು ಹಾಯಿಸುತ್ತಿದ್ದೆ…! ಆದರೆ ಸಪ್ಟೆಂಬರ್ 11ರಂದು ಮಲಯಾಳಂ ನ್ಯೂಸ್ ಚಾನೆಲ್ ವೊಂದರಲ್ಲಿ ಆ ‘ಬ್ರೇಕಿಂಗ್ ನ್ಯೂಸ್’ ನೋಡಿದಾಗ ಮನಸ್ಸು ಬಹಳ ರೋಧಿಸಿತ್ತು… ಮನ ಮೌನವಾಯಿತ್ತು…. ಭಗವಂತನ ಮೇಲೆ ಇದ್ದ ಸರ್ವ ನಂಬಿಕೆ – ವಿಶ್ವಾಸ ಪೂಣ೯ವಾಗಿ ಮನಸ್ಸಿನಿಂದ ಕೊಚ್ಚಿ ಹೋಯಿತ್ತು…!!
       ಇದೊಂದು ಪ್ರಣಯ ಜೋಡಿಗಳ ಕಥೆ…! ದುರಂತ ಕಥೆ…!ಇದು ಕೇವಲ ‘ಫೇಸ್ ಬುಕ್’ ಲವ್ ಆಗಿರುವುದಿಲ್ಲ…! ಅವರು ಬಾಲ್ಯದ ಮಿತ್ರರು… ನಂತರ ಪ್ರೇಮ ಜೋಡಿಗಳು…!ಅದು ಸುಮಾರು ಹತ್ತು ವಷ೯ಗಳ ಪ್ರಣಯ…! ಆದರೆ ಈ ಜೋಡಿಗಳ ಮದುವೆಗೆ ‘ಧಮ೯’ ದೊಡ್ಡ ಬೇಲಿ ಹಾಕಿತ್ತು…!ಪ್ರಿಯಕರ ಕ್ರಿಶ್ಚಿಯನ್…. ಪ್ರೇಯಸಿ ಹಿಂದು…! ಮೊದಲು ಈ ಪ್ರಣಯ ಪಕ್ಷಿಗಳ ಎರಡು ಕುಟುಂಬಗಳು ಮದುವೆಗೆ ಒಪ್ಪಿಗೆ ನೀಡಲೇ ಇಲ್ಲ…! ಆದರೆ ಈ ಶುದ್ಧ ಪ್ರಣಯ ಪರಸ್ಪರ ದೂರವಾಗಿ
‘ಸೋಲು’ವುದೇ ಇಲ್ಲ ಎಂಬ ನಗ್ನ ಸತ್ಯ, ಈ ಜೋಡಿಗಳ ಹೆತ್ತವರಿಗೆ ತಿಳಿದಾಗ, ಇವರು ಮದುವೆಗೆ ಒಪ್ಪಿಗೆ ನೀಡಿ ಜೂನ್ 2ರಂದು ಮದುವೆ ನಿಶ್ಚಿತಾಥ೯ವನ್ನು ಮಾಡಿದ್ದರು… ನಂತರ ವಿಧಿಯಾಟ ತನ್ನ ಹುಚ್ಚಾಟವನ್ನು ಪ್ರಾರಂಭಿಸಿಯೇ ಬಿಟ್ಟಿತ್ತು…..!
    ಈ ಜೋಡಿ ವಾಸ ಮಾಡುತ್ತಿದ್ದು, ನಮ್ಮ ದೇಶದ ‘ದೇವರನಾಡು ‘ ಖ್ಯಾತಿಯ ‘ದೇವರ ನಾಡು’ ಕೇರಳದಲ್ಲಿ…! ಆದರೆ ಈಗ ಅವರ ಜನ್ಮಭೂಮಿ ‘ ವಯನಾಡು’ ಮಸಣ ಭೂಮಿಯಾಗಿದೆ…! ಈ ವರ್ಷದ ಮಳೆಗಾಲದಲ್ಲಿ ಪ್ರಕೃತಿ ಮಾತೆಯ ಮುನಿಸಿಗೆ, ನಮ್ಮ ಕಥಾ ನಾಯಕಿ ಶೃತಿಯ ಹೆತ್ತವರು ಸೇರಿ ಒಂಬತ್ತು ಮಂದಿ ಮನೆ ಸದಸ್ಯರನ್ನು ಭೂಮಾತೆ ನುಂಗಿಯೇ ಬಿಟ್ಟಿತ್ತು…! ದೂರದ ನಗರದ ಅಸ್ಪತ್ರೆಯೊಂದರಲ್ಲಿ ಶೃತಿ ಉದ್ಯೋಗಿಯಾಗಿದ್ದ ಕಾರಣ, ಶೃತಿಯು ಮಾತ್ರ ಜೀವ ಉಳಿಸಿಕೊಂಡು, ಅನಾಥೆಯಾಗಿ ಬಿಡುತ್ತಾಳೆ. ಆದರೆ ಪ್ರಿಯಕರ… ಮುಂದಿನ  ಭಾವಿಪತಿ ಜೆನ್ಸನ್ ಮಾತ್ರ, ಶೃತಿಗೆ ಧೈಯ೯ ತುಂಬಿ, ಸದಾ ಸಮಯ ನೆರಳಾಗಿ ನಿಂತು, ಅವಳ ಮನಸ್ಸಿನ ಸವ೯ ಸಂಕಟಗಳನ್ನು ದೂರ ಮಾಡುವುದರಲ್ಲಿ, ಕೇವಲ ಒಂದು ತಿಂಗಳುಗಳಲ್ಲಿಯೇ ಯಶ್ವಸಿಯಾಗುತ್ತಾನೆ..!

  ಶೃತಿ ಸಹ ಸರ್ವ ಸಂಕಟಗಳನ್ನು ಮರೆತು, ಬಾಳಿನಲ್ಲಿ ಹೊಸ ಕನಸುಗಳನ್ನು ಕಾಣಲು ಪ್ರಾರಂಭಿಸುತ್ತಾಳೆ… ಹೀಗಿರುವಾಗ ದುರಂತ ಭೂಮಿ ಪುತ್ತಮಲದಲ್ಲಿ ಅಂತ್ಯಸಂಸ್ಕಾರ ಮಾಡಿರುವ ಒಂದು ಜೋಡಿಯ ಶವಗಳಿಗೆ, ಶೃತಿಯ DNA ಹೊಂದಾಣಿಕೆ ಆಗುತ್ತದೆ ಎಂದು ತಿಳಿದಾಗ, ಶೃತಿಯೂ ತನ್ನ ಹೆತ್ತವರು ಆಗಿರಬಹುದು ಎಂದು ಭಾವಿಸಿ ಅವರನ್ನು ನೋಡಲು ಜೆನ್ಸನ್ ನ ವ್ಯಾನ್ ನಲ್ಲಿ ಹೋಗಿ ಮರಳಿ ಬರುತ್ತಿದ್ದಾಗ, ರಸ್ತೆ ಅಪಫಾತದಲ್ಲಿ ತೀವ್ರ ಗಾಯಗೊಂಡಿದ್ದ, ಈ ಪ್ರಣಯ ಜೋಡಿಗಳ ಪೈಕಿ ಜೆನ್ಸನ್ ನ ಪ್ರಾಣಪಕ್ಷಿಯೂ ಅಸ್ಪತ್ರೆಯಲ್ಲಿ ಮರುದಿನ ಹಾರಿ ಹೋಯಿತ್ತು..!ಪುನಃ ಎಂದಿನಂತೆ ಶೃತಿ ಅನಾಥೆಯಾಗಿಬಿಟ್ಟಳು…! ಭಗವಂತ ಶೃತಿ ವಿಚಾರದಲ್ಲಿ ತುಸು ಕರುಣೆ ತೋರಿಸಲಿಲ್ಲ…!

‘ಕಲಬೆರಕೆ ‘ ಇಲ್ಲದೇ ಇರುವ ನೈಜ ಪ್ರಣಯವು ಭಗವಂತನ ‘ಶಾಪ’ದಿಂದ ಪತನವಾಗಿಯೇ ಬಿಟ್ಟಿತ್ತು…!ಈಗ ನಾವು ಭಗವಂತನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲೇ ಬೇಕು… ಏಕೆಂದರೆ ಈಗ ಶೃತಿಯ ನಯನಗಳಲ್ಲಿ ಹರಿಯುತ್ತಿರುವುದು
‘ಕಣ್ಣೀರು’ವಾಗಿರುವುದಿಲ್ಲ…! ಸೋತ ಪ್ರಣಯದ ‘ರಕ್ತ’ವಾಗಿದೆ…!

ಈಗ ಪ್ರಣಯದ ಮಹಾ ದುರಂತ
ಆಧ್ಯಾಯ ಮುಗಿದು ಬಿಟ್ಟಿದೆ… ಜೆನ್ಸನ್ ತನ್ನ ಪ್ರೇಯಸಿಯನ್ನು ಒಂಟಿ ಮಾಡಿ, ಮತ್ತೊಂದು ಲೋಕಕ್ಕೆ ಶಾಶ್ವತವಾಗಿ ಪ್ರಯಾಣ ಬೆಳೆಸಿದ್ದಾನೆ… ತೀವ್ರ ಗಾಯಗೊಂಡಿದ್ದ ಶೃತಿ ಅಸ್ಪತ್ರೆಯ ಹಾಸಿಗೆಯಲ್ಲಿಯೇ ಮಲಗಿಕೊಂಡು, ತನ್ನ ‘ಪ್ರಾಣನಾಥ’ನ ಅಂತಿಮ ದಶ೯ನ ಮಾಡಿಕೊಳ್ಳುವಂತಹ ಪರಿಸ್ಥಿತಿಯೂ ನಿಮಾ೯ಣವಾಯಿತ್ತು.. ಕೊನೆಗೆ ಒಂದು ಬಾರಿ ಬಿಗಿಯಾಗಿ ಅಪ್ಪಿಕೊಂಡು ರೋಧಿಸುವಂತಹ ಸ್ಥಿತಿಯಲ್ಲಿಯೂ ಶೃತಿ ಇರಲಿಲ್ಲ…!

   “ಓ..ಜೆನ್ಸನ್… ನನ್ನನ್ನು ಬಿಟ್ಟು ಹೋಗಬೇಡಾ…ನನ್ನನ್ನು ಕರೆದುಕೊಂಡು ಹೋಗು…. ನಿನ್ನ ಜೊತೆ ನಾನು ಸಹ ಬರುತ್ತೇನೆ….!” ಎಂದು ಶೃತಿ ಮಲಗಿಕೊಂಡು ರೋಧಿಸುತ್ತಿದ್ದರೇ, ಕಲ್ಲು ಹೃದಯ ಸಹ ಒಮ್ಮೆ ಕರಗುತ್ತದೆ!.
    ಇಂದು ಆ ಪ್ರಣಯ ಜೋಡಿ…. ಎರಡು ಎರಡು ಕುಟುಂಬಗಳು ಕಂಡ ಎಲ್ಲಾ ಕನಸುಗಳು ಪೂಣ೯ವಾಗಿ ನಾಶವಾಗಿದೆ… ಭಗವಂತ ತುಸು ‘ಕರುಣೆ’ ತೋರಿಸದೇ, ಬಡಜೀವಗಳಿಗೆ ಕಠಿಣ
‘ಶಿಕ್ಷೆ’ಯನ್ನು ನೀಡಿದ್ದಾನೆ… ! ಈ ‘ತೀಪು೯’ ಸರಿಯೇ…? ಎಂದು ಪ್ರಶ್ನೆ
ಮಾಡಿದ್ದರೇ,.ಸ್ಪಷ್ಟವಾದ ಉತ್ತರ ದೊರೆಯುವುದಿಲ್ಲ…! ಎದುರಿಗೆ ದೊಡ್ಡ ಪ್ರಶ್ನೆ ಚಿಹ್ನೆ ಮಾತ್ರ ನಗುತ್ತಾ ನಿಂತಿರುತ್ತದೆ…!

ಈ ಭೂಮಿಯಲ್ಲಿ ‘ಮನುಜ’ ಯಾವುದೇ ತಪ್ಪುಗಳನ್ನು ಮಾಡದೇ, ಬದುಕು ಸಾಗಿಸಲು ಸಾಧ್ಯವಿಲ್ಲ…! ಈ ತಪ್ಪುಗಳಿಗೆ ಸಣ್ಣ ಪ್ರಮಾಣದಲ್ಲಿ ಭಗವಂತ ಶಿಕ್ಷೆ ನೀಡಿದ್ದರೇ, ಮುಂದೆ ಮನುಜ ತಪ್ಪುಗಳನ್ನು ತಿದ್ದಿ ಬದಲಾಗುವ ಸಾಧ್ಯತೆ ಇರುತ್ತದೆ…!

ಈ ರೀತಿಯ ಉಗ್ರ ಶಿಕ್ಷೆಯನ್ನು ಭಗವಂತ ನೀಡಿದ್ದರೂ, ಭಗವಂತ ಪ್ರಣಯವನ್ನು ಸೋಲಿಸಿ ‘ ಗೆಲುವು’ ಸಾಧಿಸಿದ್ದಾನೆ ಎಂದು ಹೇಳಲು ಸಾಧ್ಯವಿಲ್ಲ….!ಇದು ‘ಪ್ರಣಯ’ದ ಸೋಲುವಲ್ಲ….! ದುರಂತ ಅಂತ್ಯ ಅಷ್ಟೇ…! ಆದರೆ ಇದು ವಿಧಿ ಅಥವಾ ಹಣೆಬರಹ ಎಂದು ಭಾವಿಸಿ ಕೈಕಟ್ಟಿ ಕುಳಿತುಕೊಳ್ಳಲು ಮನಸ್ಸು ಒಪ್ಪುದಿಲ್ಲ…!

  ಈಗ ಸರ್ವರು ಭಗವಂತನಿಗೂ ‘ಶಾಪ’ ಹಾಕುವಂತಹ ಕೆಟ್ಟ ದಿನ ಸೃಷ್ಟಿಯಾಗಿದೆ…! ಈ ನತದೃಷ್ಟರ ಮುಂದಿನ ಬದುಕು ಕುರಿತು, ಖ್ಯಾತ ಚಿತ್ರ ಕಲಾವಿದ ಬಿಡಿಸುವ ಚಿತ್ರಗಳಿಗೂ ‘ಬಣ್ಣ’ ಇರುವುದಿಲ್ಲ…! ಆದರೂ ಕೊನೆದಾಗಿ ನಾವು ಭಗವಂತನಲ್ಲಿ ಒಂದು ಪ್ರಾಥ೯ನೆ ಮಾಡೋಣ….!
    ” ಈ ನತದೃಷ್ಟ ಜೋಡಿಗಳನ್ನು ಮುಂದಿನ ಜನ್ಮದಲ್ಲಿಯೂ ಪ್ರೇಮಿಗಳಾಗಿ ಸೃಷ್ಟಿಸಿ, ಇಂದು ಅವರು ಕಂಡ ಸವ೯ ಕನಸುಗಳನ್ನು ನನಸು ಮಾಡು…! ಯಾವುದೇ ಪ್ರಣಯಗಳನ್ನು ಕೊಲ್ಲಬೇಡಾ…!ಪ್ರಣಯ ಈ ಭೂಮಿಯಲ್ಲಿ ಸದಾ ಇರಬೇಕು…!!”.


Leave a Reply

Back To Top