ಗಿರಿಜಾ ಇಟಗಿ ಕವಿತೆ-ಗೋರ್ಟಾದ ಅಮರಜ್ಯೋತಿಗಳು

ಗೋರ್ಟಾ ಹತ್ಯಾಕಾಂಡದ ಕತೆಯ ಹೇಳತಿನಿ ಕೇಳಿರಿ ನೀವೆಲ್ಲಾ|
ನಿಜಾಂಶಾಹಿಯ ಹೊಡೆತಕೆ ಸಿಕ್ಕು ಮಸಣವಾದ ವ್ಯಥೆಯ||ಪ||

ಹಿಂದೂ ಮುಸ್ಲಿಂ ಬಾಂಧವರಲ್ಲಿ ಊರಿನ ಮುಕುಟಗಳು|
ಮುಸ್ಲಿಂನೊಬ್ಬನು ಕುತಂತ್ರದಿಂದ ಬಿಳಿಸಿದ ಮಸೀದಿ ಕಲ್ಲ|
ಸ್ವತಂತ್ರ ಸವಿಗಾಳಿ ಸುಳಿಯದ ಕಾರಣ ಗ್ರಾಮದ ಜನ ಕೂಡಿ|
ಬೇವಿನ ಮರದ ಮ್ಯಾಲ ಹಾರಿಸಿ ತಿರಂಗಾ ಜೈ ಅಂತ||

ಇಸಾಮುದ್ದಿನ ನೀಡಿದ ಶಿಕ್ಷೆಗೆ ಹೊತ್ತಿತು ಕಿಡಿಯಿಲ್ಲಿ|
ಬೆಳ್ಳಕ್ಕಿ ಹಿಂಡು ಚದುರಿದಾಂಗ ಆಯ್ತು ಊರ ಗೋಳ|
ನಲವತ್ತು ಬಂಡಿಯ ಬೆಂಗಾವಲಿನ ಇಸ್ಸಾಮ ಹತನಾದ|
ವಿಮೋಚನ ಚಳುವಳಿಗೆ ಸಾಕ್ಷಿಯಾಯ್ತು ಊರ||

ವಿರುಪಾಕ್ಷಗೌಡರ ನಾಟಕ ನೋಡಾಕ ನೆರೆದ ಮಂದಿಮ್ಯಾಲ|
ಕೊಬ್ಬಿದ ರಜಾಕರರು ಉಬ್ಬುಬ್ಬಿ ಬಂದು|
ಈರುಳಿ ಹೆಚ್ಚಿದಾಂಗ ಜನರ ರುಂಡ ಕತ್ತರಿಸ್ಯಾರ|
ಬಾಣಂತಿ ಕೂಸ ಬಿಡದೆ ಹಿಡಿದು ಕೊಂದಾರ||

ಡುಮಣಿ ಗೌಡರ ಮನಿಯಾಗ ಆಶ್ರಯ ಪಡೆದವರ|
ಎಳೆಎಳೆದು ತಂದು ಖೂನ ಹರಿಸ್ಯಾರ|
ಲಕ್ಷ್ಮಿದೇವಿಯು ಸಾಕ್ಷಿಯಾದಳು ಈ ಎಲ್ಲಾ ಘಟನಾಕ|
ಮತ್ತೊಂದು ಜಲಿಯನ್ ವಾಲಾಬಾಗ್ ಆಯ್ತು ಈ ಗ್ರಾಮ||

ಪಟೇಲ ಮುನ್ಷಿ ಸೈನ್ಯ ಕರೆಸಿ ವಿಮೋಚನ ಕೊಡಸ್ಯಾರ|
ಕಲ್ಯಾಣದ ಈ ಕೆಚ್ಚದೆ ಗ್ರಾಮ ಸ್ಮಾರಕವಾಗ್ಯಾದ|
ಅಮರಜ್ಯೋತಿಯು ಹುತಾತ್ಮರ ಕಥೆಯ ಸಾರಿ ಹೇಳತದ
ಹಿಂದೂ ಮುಸ್ಲಿಂ ಎರಡು ಕಣ್ಣು ಈ ಊರಿಗೀಗ||

One thought on “ಗಿರಿಜಾ ಇಟಗಿ ಕವಿತೆ-ಗೋರ್ಟಾದ ಅಮರಜ್ಯೋತಿಗಳು

  1. ಅದ್ಭುತವಾದ ಕವನ ಮೇಡಂ ನಿಮ್ಮ ಕಾವ್ಯ ಕೃಷಿ ಹೇಗೆ ಮುಂದುವರೆಯಲಿ

Leave a Reply

Back To Top