ಕಾವ್ಯ ಸಂಗಾತಿ
ವಂದಗದ್ದೆ ಗಣೇಶ್
ಬಂಗಾರದ ತಟ್ಟೆ
- ಅಂದೊಂದು ಸಂಜೆಯಲಿ ಕಾಶಿದೇಗುಲದಲ್ಲಿ
ಬಂಗಾರದ ತಟ್ಟೆಯು ಕಾಣಿಸಿತು ಗುಡಿಯೊಳಗೆ
ಅದರ ಮೇಲೆ ಬರೆದಿತ್ತು ಸುವರ್ಣಾಕ್ಷರಗಳಲ್ಲಿ
ದೇವರನು ಪ್ರೀತಿಸುವವಗದು ಕೊಡುಗೆಯೆಂದು
ದೇಗುಲದ ಅರ್ಚಕ ಮಾಡಿದನು ಘೋಷಣೆಯ
ಅದಕರ್ಹರಾದವರು ನಸುಕಿನಲಿ ಬರುವುದು
ಅವರ ದಾನಧರ್ಮಗಳನೆಲ್ಲ ತಾನು ಆಲಿಸುತ
ನಿರ್ಧರಿಸುವೆ ಅದಕರ್ಹ ವ್ಯಕ್ತಿಯನು ಎಂದು
ಸಾವಿರಾರು ಸಂಖ್ಯೆಯಲಿ ಆಗಮಿಸಿದ ಜನರಲ್ಲಿ
ಸಾಲಿನಲ್ಲಿ ನಿಂತರು ತಟ್ಟೆಯಾಕಾಂಕ್ಷೆಯಲಿ
ಅವರ ವರದಿಯನಾದರಿಸಿ ಅದರಲ್ಲಿ ಶ್ರೇಷ್ಠನಿಗೆ
ತಟ್ಟೆಯನು ಕೊಡಲಂದು ಅಣಿಯಾದ ಅರ್ಚಕನು
ಸಂತಸದಿ ಪುಳಕಿತನಾದ ಆ ಗಣ್ಯ ವ್ಯಕ್ತಿಯು
ಚಾಚಿದನು ಕೈಯ ತಟ್ಟೆಯನ್ನು ಪಡೆಯಲು
ಅವನ ಕೈ ತಾಕುತಲೆ ಆ ಹೊಳೆವ ತಟ್ಟೆಯು
ಕಳಪೆ ಲೋಹವಾಗುತದು ಮಾರ್ಪಟ್ಟಿತು
ಭಯಗೊಂಡ ಧನಿಕ ತಟ್ಟೆಯನ್ನು ಕೈಬಿಡಲು
ಮತ್ತೊಮ್ಮೆ ಮಿರಮಿರ ಮಿಂಚಿತ್ತು ಆ ತಟ್ಟೆ
ಆ ಘಟನೆ ತೋರಿಸಿತು ನೆರೆದಿದ್ದ ಭಕ್ತರಿಗೆ
ಧನಿಕನದಕನರ್ಹನು ಎಂಬ ಕಟು ಸತ್ಯವನು
ದಾನ ಧರ್ಮಗಳ ಪಹರೆ ಹೆಚ್ಚುತ್ತ ಹೋದಂತೆ
ಯಾಚಕರ ಸಂಖ್ಯೆಯೂ ಹೆಚ್ಚುತ್ತ ಹೋಯಿತು.
ಕಾಶೀ ದೇವರು ಪ್ರೀತಿಸುವ ಭಕ್ತ ಬರದಿದ್ದರೂ
ನೆಮ್ಮದಿಯ ಬಾಳವರ ಹುಡುಕುತ್ತ ಬಂದಿತ್ತು.
ಆರು ವರ್ಷಗಳ ಬಳಿಕ ಬಂದನೊಬ್ಬನು ಭಕ್ತ
ತನ್ನ ಆಸ್ತಿಯನೆಲ್ಲಹಂಚಿದವ ಈ ಅವಧಿಯಲಿ
ಅವನು ಅರ್ಹನೆನುತ ತಟ್ಟೆಯನ್ನು ನೀಡಿದರೆ
ಲೋಹದ ತಗಡಾಗುತದು ಕೂಡ ಕೆಳಗುರುಳಿತು.
ಬಹು ದಿನಗಳ ಬಳಿಕ ಬಡರೈತನೋರ್ವನು
ಈಗುಲದ ಮುಂದೆಯೇ ಹಾದುಹೋಗುತಲಿದ್ದ
ಅಲ್ಲೆನೆರದಿಹ ಭಿಕ್ಷುಕರ ಸ್ಥಿತಿಗತಿಯನು ಕಂಡು
ಮನಕರಗಿ ಸೇವೆಯ ಮಾಡುತ್ತಲಿದ್ದನವ.
ಅದಕಂಡ ಅರ್ಚಕನವನ ದೇಗುಲಕೆ ಕರೆತಂದು
ಅವನಿಗೆ ಕೊಡ ಹೊರಟ ಆ ಹೊಳೆವ ತಟ್ಟೆಯ
“ಬದುಕಿನಲಿ ಒಂದಿನಿತು ಧರ್ಮ ಮಾಡದೆನಗೆ
ಅದನು ಪಡೆಯುವರ್ಹತೆ ಎಲ್ಲಿಂದ ಬರುವುದು?”
ಎನುತ ದೈನ್ಯದಿ ಅದನು ಪಡೆಯದೆಯೆ ಅವನು
ದೇವರಿಗೆ ವಂದಿಸುತ ಹೊರಡಲು ಅಣಿಯಾದ
ಬಿಡದೆ ಅರ್ಚಕನಾ ತಟ್ಟೆಯ ಅವನ ಕೈಯಲಿರಿಸಲು
ನೂರ್ಪಟ್ಟು ಕಾಂತಿಯಲದು ಮಿಂಚತೊಡಗಿತು
ಆ ತಟ್ಟೆಯ ದೇಗುಲದಿ ಹಾಗೆಯೇ ಇರಿಸುತ್ತ
ಬಡ ರೈತ ಹೊರಟನು ತನ್ನ ದಾರಿ ಹಿಡಿಯುತ
ಜನಸೇವೆ ಜನಾರ್ಧನ ಸೇವೆ ಎಂದು ಅರಿತವನೆ
ದೇವರನ್ನು ಪ್ರೀತಿಸುವುವರಲಿ ಅತಿ ಶ್ರೇಷ್ಠನೆನಿಪನು.
ವಂದಗದ್ದೆ ಗಣೇಶ್
Super