ಅರ್ನಾಲ್ಡ್ ಪಾಮರ್, 1960ರ ದಶಕದಲ್ಲಿ ಅತ್ಯಂತ ಪ್ರಖ್ಯಾತನಾದ ಗಾಲ್ಫ್ ಆಟಗಾರನಾಗಿದ್ದ. ಐದು ದಶಕಗಳ ಆತನ ಆಟದ ಅವಧಿಯಲ್ಲಿ ಆತ ವಿಶ್ವದ ಐದನೇ ಚಾಂಪಿಯನ್ ಎಂಬ ಪಟ್ಟವನ್ನು ಗಳಿಸಿದ್ದರೂ ಆತನ ಆಟ ಅದೆಲ್ಲವನ್ನು ಮೀರಿತ್ತು. 1955ರ ಸುಮಾರಿಗೆ ದೂರದರ್ಶನದ ತಾರೆ ಎನಿಸಿದ ಗಾಲ್ಫರ್ ಅರ್ನಾಲ್ಡ್ ಪಾಮರ್ ಕ್ರೀಡಾ ಕ್ಷೇತ್ರದಲ್ಲಿ ಎಂದೇ ಪ್ರಖ್ಯಾತನಾಗಿದ್ದು ‘ದ ಕಿಂಗ್’ ಎಂಬ ಹೆಸರಿನಿಂದಲೇ ಕರೆಯಲ್ಪಡುತ್ತಿದ್ದ.

 ಗಾಲ್ಫ್ ಕ್ರೀಡೆಯಲ್ಲಿ ಆತನ ಕೌಶಲ್ಯವನ್ನು ಕಂಡು ಇಡೀ ಜಗತ್ತಿನ ಗಾಲ್ಪ್ ಪ್ರಿಯರು ಮೆಚ್ಚಿ ಆರಾಧಿಸುತ್ತಿದ್ದರು.ಆತ ಯಶಸ್ಸಿನ ಉತ್ತುಂಗದಲ್ಲಿದ್ದಾಗ ಒಂದು ಬಾರಿ ಸೌದಿ ಅರೇಬಿಯಾದ ದೊರೆ ತನ್ನ ದೇಶದಲ್ಲಿ ಗಾಲ್ಫ್ ಮೈದಾನವನ್ನು ನಿರ್ಮಿಸಿ ಅದರ ಉದ್ಘಾಟನೆಗೆ ವಿಶ್ವದ ಪ್ರಖ್ಯಾತ ಗಾಲ್ಫ್ ಆಟಗಾರರನ್ನು ಮತ್ತು ವಿಶೇಷವಾಗಿ ಅರ್ನಾಲ್ಡ್ ಪಾಮರ್ ನನ್ನು ಆಹ್ವಾನಿಸಿದನು. ಅತ್ಯಂತ ವಿಶಿಷ್ಟವಾದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಾಲ್ಫ್ ಆಟದಲ್ಲಿ ಪಾಲ್ಗೊಂಡ ಎಲ್ಲಾ ಅತಿಥಿಗಳು ಅಂದು ವಿಶೇಷವಾಗಿ ಸಜ್ಜುಗೊಳಿಸಲಾದ ಭೋಜನಕೂಟದಲ್ಲಿ ಸೌದಿ ಅರೇಬಿಯಾದ ರಾಜನ ಆತಿಥ್ಯವನ್ನು ಸವಿಯುತ್ತಿದ್ದರು.ಅತಿಥೇಯ ಸೌದಿ ಅರೇಬಿಯಾದ ರಾಜನು ಎಲ್ಲರನ್ನು ಹಾರ್ದಿಕವಾಗಿ ಕುಶಲೋಪರಿ ವಿಚಾರಿಸುತ್ತ ಅರ್ನಾಲ್ಡ್ ಪಾಮರ್ ಬಳಿ ಬಂದನು.

 ಸೌದಿಯ ರಾಜನು ಅರ್ನಾಲ್ಡ್ ನೊಂದಿಗೆ ಮಾತನಾಡುತ್ತಾ ನಿಮಗೆ ಏನಾದರೂ ಬೇಕೆ? ಎಂದು ಕೇಳಿದನು. ಖುದ್ದು ಮಹಾರಾಜನೇ ಹೀಗೆ ಪ್ರಶ್ನಿಸಿದಾಗ ಅರ್ನಾಲ್ಡ್ ಸಂಕೋಚದ ಜೊತೆಗೆ ತುಸು ಗಲಿಬಿಲಿಗೊಂಡನು. ಆದರೆ ಕೇಳುತ್ತಿರುವುದು ಸೌದಿ ಅರೇಬಿಯಾದ ಶ್ರೀಮಂತ ಮಹಾರಾಜ ಆತನ ಮನಸ್ಸಿನ ಸಮಾಧಾನಕ್ಕಾದರೂ ಕೇಳಬೇಕು ಎಂದುಕೊಂಡ ಅರ್ನಾಲ್ಡ್ ನನಗೊಂದು ಕ್ಲಬ್ ಬೇಕು ಎಂದು ಕೇಳಿದ. ಖಂಡಿತವಾಗಿಯೂ ನಿಮ್ಮ ಆಶೆ ನೆರವೇರುತ್ತದೆ ಎಂದು ಹೇಳಿದ ರಾಜ ಮುಂದುವರೆದು ಇತರ ಅತಿಥಿಗಳನ್ನು ವಿಚಾರಿಸಿಕೊಳ್ಳತೊಡಗಿದ.

 ಅಮೆರಿಕಕ್ಕೆ ಮರಳಿದ ಅರ್ನಾಲ್ಡ್  ಕುತೂಹಲ ಮತ್ತು ನಿರೀಕ್ಷೆಯಿಂದ ಪ್ರತಿ ದಿನವೂ ತನ್ನ ಅಂಚೆ ಪೆಟ್ಟಿಗೆಯನ್ನು ಪರೀಕ್ಷಿಸುತ್ತಿದ್ದ. ವಾರ ಕಳೆಯಿತು ಎರಡು ವಾರವು ಕೂಡ ಕಳೆದಾಗ ನಿರೀಕ್ಷೆಯ ಭಾರದಿಂದ ಬಸವಳಿದ ಅರ್ನಾಲ್ಡ್ ಅಯ್ಯೋ! ಅತಿಥಿಗಳನ್ನು ಔಪಚಾರಿಕವಾಗಿ ಮಾತನಾಡಿಸುವ ಜವಾಬ್ದಾರಿಯುಳ್ಳ ಅತಿಥೇಯನಾಗಿ ಮಹಾರಾಜರು ನನ್ನನ್ನು ಪ್ರಶ್ನಿಸಿರಬಹುದು…ಅವರಿಗೆ ಅವರದ್ದೇ ಆದ ನೂರಾರು ಕೆಲಸದ ಒತ್ತಡಗಳಿರುತ್ತವೆ, ನನ್ನಂತಹ ವ್ಯಕ್ತಿಯ ಬೇಡಿಕೆಯ ಕುರಿತು ಯೋಚಿಸಲು ಅವರಿಗೆ ಪುರುಸೊತ್ತಾದರೂ ಎಲ್ಲಿರುತ್ತದೆ? ಎಂದು ಅರ್ನಾಲ್ಡ್ ಸುಮ್ಮನಾಗಿ ಬಿಟ್ಟನು.

 ಅರ್ನಾಲ್ಡ್ ನ ಸೌದಿ ಅರೇಬಿಯಾ ಭೇಟಿಯ  3 ವಾರಗಳ ನಂತರ ಆತನಿಗೆ ಬೃಹತ್ತಾದ ಲಕೋಟೆಯೊಂದು ಅಂಚೆಯಲ್ಲಿ ದೊರೆಯಿತು. ವಿದೇಶಿ ಅಂಚೆ ಮುದ್ರೆಯನ್ನು ಹೊಂದಿದ್ದ ದಪ್ಪನೆಯ ಲಕೋಟೆಯನ್ನು ತುಸು ಕುತೂಹಲದಿಂದಲೇ ಅರ್ನಾಲ್ಡ್ ತೆರೆದು ನೋಡಿದಾಗ ಆತನಿಗೆ ಆಶ್ಚರ್ಯ ಕಾದಿತ್ತು. 500 ಎಕರೆ ಭೂಮಿಯನ್ನು ಅಮೆರಿಕಾದಲ್ಲಿ ಗಾಲ್ಫ್ ಕ್ಲಬ್ ಗೆಂದು ಖರೀದಿಸಿ ಆತನ ಹೆಸರಿಗೆ ಸೌದಿ ಅರೇಬಿಯಾದ ಮಹಾರಾಜನು ರಿಜಿಸ್ಟರ್ ಮಾಡಿದ ಕೊಡುಗೆ ಪತ್ರವಾಗಿತ್ತದು.

 ಅರ್ನಾಲ್ಡ್ ಅವರ ಆಶ್ಚರ್ಯಕ್ಕೆ ಮಿತಿ ಇರಲಿಲ್ಲ.
 ಗಾಲ್ಫ್ ಕ್ರೀಡೆಯ ಪರಿಭಾಷೆಯಲ್ಲಿ ಕ್ಲಬ್ ಎಂದರೆ ಗಾಲ್ಫ್ ಆಡಲು ಬಳಸುವ ಸಾಧನ ಬ್ಯಾಟ್ ಕೂಡ ಹೌದು, ಗಾಲ್ಫ ಕ್ರೀಡೆಗೆ ಬಳಸುವ ವಿಶಾಲವಾದ ಮೈದಾನವೂ ಹೌದು. ಅರ್ನಾಲ್ಡ್ ಕೇಳಿದ್ದು ಗಾಲ್ಫ್ ನ ಬ್ಯಾಟ್ ಆಗಿದ್ದರೆ ಮಹಾರಾಜ ಗ್ರಹಿಸಿ ನೀಡಿದ್ದು ಅತ್ಯಂತ ಬೆಲೆ ಬಾಳುವ ಗಾಲ್ಫ್ ನ ಮೈದಾನವನ್ನು. ಅದೂ ಅಮೆರಿಕಾದಂತಹ ದೇಶದಲ್ಲಿ 500 ಎಕರೆ ಭೂಮಿ ಎಂದರೆ ಅದರ ಕಿಮ್ಮತ್ತಿನ ಅರಿವು ನಮಗಾಗಬಹುದು.

 ಆಶ್ಚರ್ಯವೆನಿಸುವ ಈ ಘಟನೆ ನಡೆದದ್ದು ಐವತ್ತು ಅರವತ್ತರ ದಶಕದಲ್ಲಿ.

 ನಮ್ಮ ಬದುಕಿನಲ್ಲಿಯೂ ಹೀಗೆಯೇ ಅಲ್ಲವೇ ಸ್ನೇಹಿತರೆ! ನಮಗೆ ಏನಾದರೂ ಸಂಕಷ್ಟ ಎದುರಾದಾಗ ಸವಾಲೊಡ್ಡುವ ಪರಿಸ್ಥಿತಿಗಳು ಬಂದಾಗ ಅಥವಾ ಯಾವುದಾದರೂ ಅವಕಾಶಗಳು ಕೈ ತಪ್ಪಿದಾಗ ನಾವು ಹಣೆಬರಹವನ್ನು,ದೇವರನ್ನು ದೂಷಿಸುತ್ತೇವೆ…. ಯಾರಿಗೆ ಗೊತ್ತು ನಮಗೆ ಕೈ ತಪ್ಪಿದ ಅವಕಾಶಕ್ಕಿಂತ ಬಲು ದೊಡ್ಡ ಅವಕಾಶವು ನಮಗಾಗಿ ಕಾದಿರಬಹುದು.

 ನಮ್ಮ ಕೋರಿಕೆಗಿಂತ ಹೆಚ್ಚಿನದನ್ನು ದೇವರು ನಮಗೆ
 ಕೊಡ ಮಾಡುತ್ತಿರಬಹುದು. ಗಾಲ್ಫ್ ನ ಬ್ಯಾಟನ್ನು ಬಯಸಿದ ಅರ್ನಾಲ್ಡ್ ಎಂಬ ಜಗದ್ವಿಖ್ಯಾತ  ಆಟಗಾರನಿಗೆ  ಸೌದಿಯ ಮಹಾರಾಜ ಐನೂರು ಎಕರೆ ಜಮೀನನ್ನು ಗಾಲ್ಫ್ ಕ್ರೀಡಾ ಮೈದಾನಕ್ಕಾಗಿ ಕೊಡ ಮಾಡುವುದಾದರೆ…. ಈ ಜಗತ್ತನ್ನೇ ಆಳುತ್ತಿರುವ ಆ ಜಗನ್ನಿಯಾಮಕನ ಕೊಡುಗೆ ಏನಿರಬಹುದು ಎಂದು ಊಹಿಸಲು ನಮ್ಮಿಂದ ಸಾಧ್ಯವೇ?

 ನಾವು ಕಳೆದುಕೊಂಡದ್ದಕ್ಕಾಗಿ ಚಿಂತಿಸದೆ, ಕಳೆದುಕೊಂಡೆವಲ್ಲ ಎಂದು ಕೊರಗದೆ, ದೇವರು ನಮಗಾಗಿ ಮತ್ತೊಂದು ಬಹುದೊಡ್ಡ ಅವಕಾಶ ನೀಡಬಹುದು ಎಂಬ ಧನಾತ್ಮಕ ಚಿಂತನೆಯು ನಮಗೆ ಬದುಕಿನಲ್ಲಿ ಹುಮ್ಮಸ್ಸು ಮತ್ತು ಉತ್ಸಾಹವನ್ನು ಕೊಡುತ್ತದೆ.

 ಮತ್ತೆ ಕೆಲ ಬಾರಿ ಸಣ್ಣದೊಂದು ಅಪಘಾತ, ಇಲ್ಲವೇ ಆಕಸ್ಮಿಕ ತೊಂದರೆಗೊಳಗಾಗಿ ಮುಂದೆ ಕೂದಲೆಳೆಯ ಅಂತರದಲ್ಲಿ  ಯಾವುದಾದರೂ ದೊಡ್ಡ ಅನಾಹುತ ತಪ್ಪಿದಾಗ, ಆ ತೊಂದರೆಯಲ್ಲಿಯೂ ನಾವು ಸಮಾಧಾನದ ನಿಟ್ಟುಸಿರು ಬಿಡುತ್ತೇವೆ.

 ಹೌದಲ್ವೇ ಸ್ನೇಹಿತರೇ,
 ಬದುಕಿನ ಲೆಕ್ಕಾಚಾರಗಳು ಬಹಳ ವಿಚಿತ್ರ. ನಮಗೆ ನಾವು ಇದುವೇ ದ ಬೆಸ್ಟ್, ಇದುವೇ ಸರಿ ಅಂದುಕೊಳ್ಳುವದಕ್ಕಿಂತಲೂ ಈ ಭೌತಿಕ ಪ್ರಪಂಚ ಕೊಡ ಮಾಡುವ ಕೊಡುಗೆಗಳನ್ನು ಆ ದೇವರೇ ನಮಗಾಗಿ ಕೊಡಮಾಡಿದ್ದಾನೆ ಎಂದುಕೊಂಡಾಗ ನಮ್ಮಲ್ಲಿ ಕೃತಜ್ಞತೆಯ ಭಾವ ಮೂಡುತ್ತದೆ.

 ಬದುಕಿನ ಪ್ರತಿಗಳಿಗೆಯನ್ನು  ಅದು ಇರುವಂತೆಯೇ ಸ್ವೀಕರಿಸೋಣ…. ಯಾರಿಗೆ ಗೊತ್ತು ದೇವರ ಯೋಜನೆ, ಲೆಕ್ಕಾಚಾರ ಏನಿದೆಯೋ ಎಂದು.


One thought on “

  1. ದೈನಂದಿನ ಸಂಗಾತಿಯಲ್ಲಿ ತಮ್ಮ ಲೇಖನಗಳು ಬಹಳಷ್ಟು ಮಾಹಿತಿ ಪೂರ್ಣವಾಗಿರುತ್ತದೆ ಮೇಡಂ ಗೊತ್ತಿಲ್ಲದ ಎಷ್ಟೋ ಸಂಗತಿಗಳು ತಮ್ಮ ಲೇಖನದ ಮೂಲಕ ಪರಿಚಯವಾಗುತ್ತವೆ ಧನ್ಯವಾದಗಳು ಮೇಡಂ

Leave a Reply

Back To Top