ಸವಿತಾ ದೇಶಮುಖ ಅವರ ಕವಿತೆ-‘ಗಿಳಿ ಹೇಳಿದ ಕಥೆ’

ಗಿಳಿಯು ಹೇಳಿತು ವ್ಯಥೆಯಲಿ
ಅಸ್ವತಂತ್ರತೆಯ ಬಂಧದಲಿ
ಪಂಜರದ ಸಲಾಕೆಯ ಮಧ್ಯದಲಿ
ನರಳುತ್ತಿರುವೆನು ಭಯದಲಿ….

ಯಥೇಚ್ಛ ಉಣ್ಣಲಿದೆ ತಿನ್ನಲಿದೆ ,
ಒಳಿತು ಬಾಳು ಸಾಗಲಿದೆ
ಒಡೆಯನ ಮಕ್ಕಳ ಒಡಲಿದೆ
ಕೈಗೊಂಬೆಯಾದರು-ರಕ್ಷಣೆ ಇದೆ….

ನನ್ನ ಹೊಳ ಹೊಳಪಿನ ಕಣ್ಣು
ಕೆಂಪು ಮೂಗನು, ಹಚ್ಚ ಹಸಿರು
ಬಣ್ಣವ, ಕಂಡು ಕುಣಿಯುತಿಹರು
ಒಲವಿನಾಗರದಲಿ ನುಲಿವರು….

ದಿನವಿಡೀ ಹೊಸ ಹೊಸ
ಶಬ್ದಗಳ ಕಲಿಸಿದ ಸಂತಸ
ನಾನು ಆಡಿದ ನುಡಿಯ ಹೊಸ
ಉಚ್ಚಾರದ ಹುರುಪಿನ ಹುಮ್ಮಸ್ಸು….

ರಾತ್ರಿಯಾದಂತೆ ಎಲ್ಲವೂ ಸ್ಮಶಾನ
ಮೌನ ,ನಾನೊಬ್ಬನ ನೊಂದ ಮನ
ಪಂಜರದಲ್ಲಿ ದೂರದ ಚಂದಿರನ
ಆಸರೆಯಲಿ , ಒಬ್ಬಂಟಿತನದ ಜನನ….

ಹೇಳತೀರದ ಸಂಕಟ ಮಧ್ಯದಲ್ಲಿ
ತೋರುಗೋಡದೆ ಮರೆ ಮಾಚಿ
ಕಣ್ಣು ಮುಚ್ಚಿ ಮಲಗುವೆ …..

ಮತ್ತೆ ಮುಗಿಲೆತ್ತರಕ್ಕೆ ಹಾರುವ ಕನಸು ಹೊತ್ತು.,..


Leave a Reply

Back To Top