ಅನಸೂಯ ಜಹಗೀರದಾರ ಗಜಲ್, ಕಾಫಿಯಾನ

ನಿನ್ನ ನೋಡಿದ ಮೇಲೆ ಕವಿತೆ ಮನದಲಿ ಹುಟ್ಟಿಕೊಂಡಿತು
ಕಬ್ಬಿಗತಿ ನಾನಾದೆ ಭಾವೋನ್ಮಾದ ಬೆಸೆದುಕೊಂಡಿತು

ಎಲ್ಲಿಯೋ ನಿಂತು ಎದೆಯ ಕದ ತಟ್ಟಿದವ ನೀನಾದೆ
ಮಿಂಚಿನ ಮುಗುಳು ನಗು ಪ್ರೀತಿ ಮುನ್ನುಡಿ ಬರೆಸಿಕೊಂಡಿತು

ನೆನಪು ಅಲೆಗಳ ಭೋರ್ಗರೆವ ಅಬ್ಬರ ದಿನವೂ ಉಕ್ಕೇರುತ್ತಿದೆ
ಮಾತಿನ ಬಿಸುಪಿಗೆ ರಂಗೇರುವ ಮೊಗ ಪ್ರೀತಿ ಕರೆಸಿಕೊಂಡಿತು

ಗಾಳಿಗುಂಟ ಮೇಘವೂ ಪ್ರೇಮ ಸಂದೇಶ ಹೊತ್ತು ತಂದಿದೆ
ಸೋನೆ ಮಳೆ ತುಂತುರು ಸಿಂಚನಕೆ ಮೈ ಮನ ಪುಳಕಗೊಂಡಿತು

ಮೋಹದ ಅಮಲಿನಲಿ ಅಕ್ಷರಗಳ ನರ್ತನವಿದೆ ಮನದಿನಿಯಾ
ಅನು ಬರೆದ ಗಜಲಿನಲಿ ಪ್ರಣಯ ರಸಗಂಗೆ ಹರಿದುಕೊಂಡಿತು


2 thoughts on “ಅನಸೂಯ ಜಹಗೀರದಾರ ಗಜಲ್, ಕಾಫಿಯಾನ

  1. ಪ್ರೀತಿಯ ಪ್ರತಿಬಿಂಬವು ಪ್ರತಿಕ್ಷಣದ ಒಲವು ಆಯಿತು,
    ನೆನಪುಗಳ ಅಲೆಗಳಲ್ಲಿ ಭಾವನೆಗಳ ಮಾಯೆಯಾಯಿತು.
    ಮೋಹದ ಮಂಜಿನಲ್ಲಿ ಅಕ್ಷರ ನೃತ್ಯ ಮುಂದುವರಿಯುತ,
    ಪ್ರಣಯ ರಸಗಂಗೆಯೇ ಮನದ ತಂಗಾಳಿ ಆಯಿತು.
    -ಪ್ರಕಾಶಚಂದ ತಾರಾಚಂದ ಜೈನ
    ಸುರಪುರ

    1. ನಿಮ್ಮ ಕಾವ್ಯಾತ್ಮಕ ಪ್ರತಿಕ್ರಿಯೆಗೆ ತುಂಬಾ ಖುಶಿಯಾಯ್ತು ಸರ್.ಹೃತ್ಪೂರ್ವಕ ಧನ್ಯವಾದಗಳು.

Leave a Reply

Back To Top