ರಾಜು ನಾಯ್ಕ ಅವರ ಕವಿತೆ-ಕವಿತೆ ಹುಟ್ಟಿಲ್ಲ

ರಜೆಗೆ ಹೋದ ಕವಿತೆ ಮತ್ತೆ
ಮರಳಿ ಬಂದು ಪೆನ್ನಿಗಿಳಿವ
ಕರುಣೆ ತೋರಿಲ್ಲ
ಸಜೆಯೊ ಹೇಗೆ ಕೇಳಿ ನಾನು
ಹೊರಳಿ ತರಲು ಮೌನ ಭಾಷೆ
ಧರಣಿ ಮಾಡಿಲ್ಲ

ಕಾಡ ಸೊಬಗು ನಾಡ ಬೆಡಗು
ಕಾವ್ಯದೊಳಗೆ ತೂರಿ ಬರೆವ
ಬಂಧ ನನಗಿಲ್ಲ
ಬೇಡಗೊಡವೆ ಒಡವೆ ಕೊಡುವೆ
ನುಡಿಯ ಮಾಲೆ ಮಾಡಿ ಮುಡಿವೆ ಎಂದು ಹೇಳಿಲ್ಲ

ವೇದ ಶಾಸ್ತ್ರ ಸಾರ ಬಸಿದು
ಮಹಾ ಕಾವ್ಯ ಓದಿ ತಿಳಿದು
ನಾನು ಬರೆದಿಲ್ಲ
ಗಾದೆ ಮಾತು ಹದನಗೊಳಿಸಿ
ನಾದ ತಾಳ ಸ್ವರವ ಬೆರೆಸಿ
ಮೋದಗೊಂಡಿಲ್ಲ

ಬಾಲ್ಯ ಹರೆಯ ಮುಪ್ಪನಪ್ಪಿ
ಬಾಲತನದ ನೆನಪ ಅಪ್ಪಿ
ಬರೆದು ಬೀಗಿಲ್ಲ
ಬಾನು ತಾರೆ ಮುಗಿಲು ಮೋಡ
ಮಳೆಗೆ ಇಳೆಗೆ ಬಾಹು ಬಂಧ
ಮನವ ಸೆಳೆದಿಲ್ಲ

ಹೂವು ಹೆಣ್ಣ ಚೆಲುವ ಗುಣಿಸಿ
ನೋವು ನಲಿವು ಎಲ್ಲ ಸೂಸಿ
ಕಾವ್ಯ ಬರೆದಿಲ್ಲ
ಬೇವು ಬೆಲ್ಲ ಬಾಳೊಳಿರಿಸಿ
ಕಾವದೇವನೆಂದು ಎಣಿಸಿ
ಬರಹ ಮೂಡಿಲ್ಲ

ಭಾಷೆ ಭಾವ ಮಿಶ್ರ ತಳಿಸಿ
ದೇಶ ಪ್ರೇಮ ವೇಷ ಧರಿಸಿ
ಕವಿತೆ ಹುಟ್ಟಿಲ್ಲ
ನಾಶ ದ್ವೇಷ ರೋಷದಲ್ಲಿ
ಪಾಶ ಹಾಕಿ ಪದವ ಹುಡುಕಿ
ಭವಿತ ಹುಡುಕಿಲ್ಲ

ಆತ್ಮ ಧ್ಯಾನ ಅಂತರಂಗ
ಪ್ರೇಮ ಕರುಣೆ ಕಾವ್ಯ ಶೃಂಗ
ಭಾವ ಬಿತ್ತಿಲ್ಲ
ತತ್ವ ಜ್ಞಾನ ತಮದ ಸಂಗ
ತಂತ್ರ ಜ್ಞಾನ ಮೌಢ್ಯ ಭಂಗ
ಏನು ತಿಳಿದಿಲ್ಲ..


Leave a Reply

Back To Top